ADVERTISEMENT

ಕೇಜ್ರಿವಾಲ್‌ ಜಾಮೀನು ಅರ್ಜಿ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 29 ಜುಲೈ 2024, 16:15 IST
Last Updated 29 ಜುಲೈ 2024, 16:15 IST
ಅರವಿಂದ ಕೇಜ್ರಿವಾಲ್‌
ಅರವಿಂದ ಕೇಜ್ರಿವಾಲ್‌   

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಅಬಕಾರಿ ನೀತಿ ಹಗರಣದ ಪ್ರಮುಖ ಸೂತ್ರದಾರಾಗಿದ್ದಾರೆ ಎಂದು ದೆಹಲಿ ಹೈಕೋರ್ಟ್‌ನಲ್ಲಿ ಸೋಮವಾರ ಪ್ರತಿಪಾದಿಸಿದ ಸಿಬಿಐ, ಕೇಜ್ರಿವಾಲ್‌ ಅವರ ಜಾಮೀನು ಅರ್ಜಿಗೆ ತೀವ್ರ ವಿರೋಧ ದಾಖಲಿಸಿತು.

ಕೇಜ್ರಿವಾಲ್‌ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನೀನಾ ಬನ್ಸಾಲ್‌ ಕೃಷ್ಣ ಅವರು ತೀರ್ಪನ್ನು ಕಾಯ್ದಿರಿಸಿದರು. 

‘ಕೇಜ್ರಿವಾಲ್‌ ಅವರು ಈ ಅಪರಾಧದಲ್ಲಿ ಭಾಗಿಯಾಗಿದ್ದಾರೆ ಎನ್ನಲು ಪುರಾವೆಗಳಿವೆ’ ಎಂದು ಸಿಬಿಐ ಪರ ವಕೀಲ ಡಿ.ಪಿ.ಸಿಂಗ್‌ ವಾದಿಸಿದರು.

ADVERTISEMENT

‘ಅವರ ಬಂಧನವಿಲ್ಲದೆ ತನಿಖೆಯನ್ನು ಪೂರ್ಣಗೊಳಿಸಲು ಸಾಧ್ಯವಿಲ್ಲ. ನಾವು ತಿಂಗಳೊಳಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದೇವೆ. ಅವರ ಬಂಧನದ ಬಳಿಕ ಸಾಕ್ಷ್ಯಗಳು ನಮಗೆ ದೊರೆತಿವೆ. ಅವರದ್ದೇ ಪಕ್ಷದ ಕಾರ್ಯಕರ್ತರು ಮಾಹಿತಿ ನೀಡಿದ್ದಾರೆ’ ಎಂದು ಹೇಳಿದ ಅವರು, ‘ವಿಚಾರಣಾ ನ್ಯಾಯಾಲಯದಲ್ಲಿ ಅಂತಿಮ ಆರೋಪ ಪಟ್ಟಿ ಸಲ್ಲಿಸಲಾಗಿದೆ’ ಎಂದು ತಿಳಿಸಿದರು.

ಕೇಜ್ರಿವಾಲ್‌ ಪರ ವಾದಿಸಿದ ಹಿರಿಯ ವಕೀಲ ಅಭಿಷೇಕ್‌ ಸಿಂಘ್ವಿ, ‘ಎಎಪಿ ಮುಖ್ಯಸ್ಥರ ವಿರುದ್ಧ ಯಾವುದೇ ನೇರ ಪುರಾವೆಗಳಿಲ್ಲ. ಅವರಿಂದ ಏನನ್ನೂ ವಶಪಡಿಸಿಕೊಂಡಿಲ್ಲ. ತನಿಖಾ ಸಂಸ್ಥೆಯು ಊಹೆಗಳನ್ನು ಆಧರಿಸಿ ಅವರನ್ನು ಬಂಧಿಸಿದೆ. ಅಲ್ಲದೆ ಅವರನ್ನು ಜೈಲಿನಿಂದ ಹೊರಗೆ ಬರದಂತೆ ನೋಡಿಕೊಳ್ಳಲಾಗುತ್ತಿದೆ’ ಎಂದು ಅವರು ಹೇಳಿದರು.

‘ಅಬಕಾರಿ ನೀತಿಯು ಸಾಂಸ್ಥಿಕ ನಿರ್ಧಾರವಾಗಿದ್ದು, ಹಲವು ಸಮಿತಿಗಳ ಮೂಲಕ ಅದು ಹಾದು ಹೋಗಿದೆ. ಅದಕ್ಕೆ ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ಸೇರಿದಂತೆ 15 ಮಂದಿ ಸಹಿ ಹಾಕಿದ್ದಾರೆ. ಹಾಗಾಗಿ ಈ ಪ್ರಕ್ರಿಯೆಯಲ್ಲಿ ಭಾಗಿಯಾದವರನ್ನೆಲ್ಲ ಸಹ ಆರೋಪಿಗಳನ್ನಾಗಿ ಮಾಡಬೇಕಲ್ಲವೇ’ ಎಂದು ಅವರು ಕೇಳಿದರು.

‘ಒಂದು ವೇಳೆ ಕೇಜ್ರಿವಾಲ್‌ ಅವರನ್ನು ಬಿಡುಗಡೆ ಮಾಡಿದರೆ, ಅವರು ಸಾಕ್ಷಿಗಳ ಪ್ರಭಾವ ಬೀರುವ ಸಾಧ್ಯತೆ ಇದೆ’ ಎಂದು ಸಿಬಿಐ ಪರ ವಕೀಲರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.