ನವದೆಹಲಿ: ಕರೆನ್ಸಿ ನೋಟುಗಳ ಮೇಲೆ ಲಕ್ಷ್ಮೀ ಮತ್ತು ಗಣೇಶ ಚಿತ್ರ ಮುದ್ರಿಸುವಂತೆ ಒತ್ತಾಯಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.
'ಭಾರತೀಯ ಕರೆನ್ಸಿಯ ಒಂದು ಬದಿಯಲ್ಲಿ ಗಾಂಧೀಜಿ ಮತ್ತು ಇನ್ನೊಂದು ಬದಿಯಲ್ಲಿ ಗಣೇಶ ಮತ್ತು ಲಕ್ಷ್ಮೀ ಚಿತ್ರ ಇರಬೇಕು ಎಂದು ದೇಶದ 130 ಕೋಟಿ ಜನರು ಬಯಸುತ್ತಾರೆ’ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
‘ದೇಶದ ಆರ್ಥಿಕತೆಯು ಉತ್ತಮ ಸ್ಥಿತಿಯಲ್ಲಿಲ್ಲ. ಕೆಲವೊಮ್ಮೆ ಎಷ್ಟೇ ಪ್ರಯತ್ನಿಸಿದರೂ ಉತ್ತಮ ಫಲಿತಾಂಶ ದೊರೆಯಲ್ಲ. ಇದಕ್ಕೆ ದೇವರ ಆಶೀರ್ವಾದ ಬೇಕಿರುತ್ತದೆ. ಅದಕ್ಕಾಗಿ ನೋಟುಗಳಲ್ಲಿ ಲಕ್ಷ್ಮೀ, ಗಣೇಶ ದೇವರ ಭಾವಚಿತ್ರಗಳಿದ್ದರೆ ಇಡೀ ದೇಶಕ್ಕೆ ಆಶೀರ್ವಾದ ಸಿಗುತ್ತದೆ’ ಎಂದು ಕೇಜ್ರಿವಾಲ್ ಬುಧವಾರ ನೀಡಿರುವ ಹೇಳಿಕೆ ರಾಜಕಾರಣದಲ್ಲಿ ಕಿಡಿ ಹೊತ್ತಿಸಿದೆ.
ಈ ವಿಷಯದ ಬಗ್ಗೆ ಸಾರ್ವಜನಿಕರಿಂದ ಅಪಾರ ಬೆಂಬಲ ವ್ಯಕ್ತವಾಗಿದೆ. ಅದರ ಬಗ್ಗೆ ಜನರಲ್ಲಿ ಅಪಾರ ಉತ್ಸಾಹವಿದೆ. ಇದನ್ನು ತಕ್ಷಣವೇ ಜಾರಿಗೆ ತರಬೇಕು ಎಂದು ಎಲ್ಲರೂ ಬಯಸುತ್ತಾರೆ. ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರವೂ ಭಾರತವು ಅಭಿವೃದ್ಧಿ ಹೊಂದುತ್ತಿರುವ ಮತ್ತು ಬಡ ರಾಷ್ಟ್ರಗಳ ಪಟ್ಟಿಯಲ್ಲಿದೆ. ಇಂದಿಗೂ ನಮ್ಮ ದೇಶದಲ್ಲಿ ತುಂಬಾ ಬಡವರಿದ್ದಾರೆ. ಏಕೆ?’ ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.
‘ಒಂದೆಡೆ ನಾಗರಿಕರೆಲ್ಲರೂ ಕಷ್ಟಪಟ್ಟು ದುಡಿಯಬೇಕು ಮತ್ತು ಇನ್ನೊಂದೆಡೆ ದೇವರ ಆಶೀರ್ವಾದವೂ ಬೇಕು. ಹಾಗಾದರೆ ಮಾತ್ರ ನಮ್ಮ ಪ್ರಯತ್ನಗಳು ಫಲಪ್ರದವಾಗುತ್ತವೆ. ಸರಿಯಾದ ನೀತಿ, ಕಠಿಣ ಪರಿಶ್ರಮ ಮತ್ತು ದೇವರ ಆಶೀರ್ವಾದಗಳ ಸಂಗಮದಿಂದ ಮಾತ್ರ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯಲು ಸಾಧ್ಯ’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಕೇಜ್ರಿವಾಲ್ ಬೇಡಿಕೆಗೆ ಬಿಜೆಪಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. ಮುಂಬರುವ ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಎಎಪಿಯ ‘ಕೊಳಕು ಹಿಂದೂ ವಿರೋಧಿ ಮುಖ’ವನ್ನು ಮರೆ ಮಾಚುವ ವಿಫಲ ಪ್ರಯತ್ನ ಎಂದು ಟೀಕಿಸಿದೆ.
ಇವುಗಳನ್ನೂ ಓದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.