ನವದೆಹಲಿ: ‘ಆಮ್ ಆದ್ಮಿ ಪಕ್ಷದ (ಎಎಪಿ) ರಾಜ್ಯಸಭಾ ಸದಸ್ಯೆ ಸ್ವಾತಿ ಮಾಲಿವಾಲ್ ಅವರು ಮೇ 13ರಂದು ಮುಖ್ಯಮಂತ್ರಿಗಳ ನಿವಾಸವನ್ನು ಅಕ್ರಮವಾಗಿ ಪ್ರವೇಶಿಸುವುದಕ್ಕಾಗಿ ಸಿ.ಎಂ ನಿವಾಸಕ್ಕೆ ಒದಗಿಸಿದ್ದ ಭದ್ರತೆಯನ್ನು ಭೇದಿಸಿದ್ದರು’ ಎಂದು ಆರೋಪಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಆಪ್ತ ಸಹಾಯಕ ಬಿಭವ್ ಕುಮಾರ್ ಅವರು ಪೊಲೀಸರಿಗೆ ಶುಕ್ರವಾರ ದೂರು ನೀಡಿದ್ದಾರೆ.
‘ಮುಖ್ಯಮಂತ್ರಿಗಳ ನಿವಾಸವನ್ನು ಅಕ್ರಮವಾಗಿ ಪ್ರವೇಶಿಸಿದ್ದ ಅವರನ್ನು ತಡೆಯಲು ನಾನು ಯತ್ನಿಸಿದಾಗ, ಸ್ವಾತಿ ಅವರು ಗದ್ದಲ ಮಾಡಿದರಲ್ಲದೇ, ನನ್ನನ್ನು ನಿಂದಿಸಿದರು’ ಎಂದೂ ಬಿಭವ್ ಕುಮಾರ್ ದೂರಿನಲ್ಲಿ ಹೇಳಿದ್ದಾರೆ.
ದೆಹಲಿಯ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಗೆ ಅವರು ಇ–ಮೇಲ್ ಮೂಲಕ ದೂರು ಕಳುಹಿಸಿದ್ದಾರೆ.
‘ಕೇಜ್ರಿವಾಲ್ ಅವರನ್ನು ಭೇಟಿ ಮಾಡಲು ಮುಖ್ಯಮಂತ್ರಿಗಳ ನಿವಾಸಕ್ಕೆ ತೆರಳಿದ್ದ ಅವರ ಮೇಲೆ ನಾನು ಹಲ್ಲೆ ಮಾಡಿದೆ ಎಂಬುದಾಗಿ ಸುಳ್ಳು ಆರೋಪ ಹೊರಿಸಿ ನನ್ನನ್ನು ಸಿಲುಕಿಸಲು ಸ್ವಾತಿ ಮಾಲಿವಾಲ್ ಯತ್ನಿಸುತ್ತಿದ್ದಾರೆ’ ಎಂದೂ ದೂರಿನಲ್ಲಿ ಹೇಳಿದ್ದಾರೆ.
ದೂರಿನ ಪ್ರತಿಯನ್ನು ಅವರು ಡಿಸಿಪಿ (ಉತ್ತರ) ಅವರಿಗೂ ಕಳುಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.