ಪಣಜಿ: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರ ನಿರ್ಧಾರವು ಪ್ರಾಮಾಣಿಕ ರಾಜಕೀಯದ ಬಗ್ಗೆ ಅವರು ಹೊಂದಿರುವ ಬದ್ಧತೆಯನ್ನು ಪ್ರದರ್ಶಿಸುತ್ತದೆ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ಗೋವಾ ಘಟಕದ ಅಧ್ಯಕ್ಷ ಅಮಿತ್ ಪಾಲೇಕರ್ ಹೇಳಿದ್ದಾರೆ.
‘ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವ ನಿಮ್ಮ ನಿರ್ಧಾರಕ್ಕೆ ಹ್ಯಾಟ್ಸ್ ಆಫ್ ಸರ್. ನಿಮ್ಮ ರಾಜಕೀಯ ಭವಿಷ್ಯವನ್ನು ಜನರ ಕೈಯಲ್ಲಿ ಇಟ್ಟಿರುವುದು ಪ್ರಾಮಾಣಿಕ ರಾಜಕೀಯದ ಬಗ್ಗೆ ನಿಮ್ಮ ಬದ್ಧತೆಯನ್ನು ತೋರಿಸುತ್ತದೆ. ಮತಗಳ ಮೂಲಕ ನಿಮ್ಮ ಭವಿಷ್ಯವನ್ನು ನಿರ್ಧರಿಸುವಂತೆ ದೆಹಲಿ ಜನತೆಗೆ ನೀವು ನೀಡಿರುವ ಕರೆ, ನಿಮ್ಮ ಸಮಗ್ರತೆ ಮತ್ತು ಪಾರದರ್ಶಕತೆಯನ್ನು ಎತ್ತಿ ತೋರಿಸುತ್ತದೆ’ ಎಂದು ಪಾಲೇಕರ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ದಿಟ್ಟ ನಡೆಯ ಮೂಲಕ ಬಿಜೆಪಿಯ ರಾಜಕೀಯ ಪ್ರೇರಿತ ದಾಳಿಗಳನ್ನು ಕೇಜ್ರಿವಾಲ್ ಕೊನೆಗೊಳಿಸಿದ್ದಾರೆ. ಜತೆಗೆ, ಪ್ರಜಾಪ್ರಭುತ್ವ ಪ್ರಕ್ರಿಯೆ ಮತ್ತು ಜನರ ತೀರ್ಪಿನಲ್ಲಿ ಅಚಲವಾದ ನಂಬಿಕೆಯನ್ನು ಇಟ್ಟುಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಭ್ರಷ್ಟಾಚಾರ ಹಗರಣದಲ್ಲಿ ಜಾಮೀನಿನ ಮೂಲಕ ಹೊರಬಂದಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಇನ್ನೆರಡು ದಿನಗಳಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಇಂದು (ಭಾನುವಾರ) ಘೋಷಿಸಿದ್ದಾರೆ.
‘ಇನ್ನೆರಡು ದಿನಗಳಲ್ಲಿ ಎಎಪಿ ಶಾಸಕರ ಸಭೆ ನಡೆಸುತ್ತೇನೆ, ಪಕ್ಷದ ನಾಯಕರೊಬ್ಬರು ಸಿಎಂ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ. ನಾವು ಪ್ರಾಮಾಣಿಕರು ಎಂದು ಜನರು ಹೇಳಿದಾಗ ಮಾತ್ರ ನಾನು ಮುಖ್ಯಮಂತ್ರಿಯಾಗಿ, ಮನೀಶ್ ಸಿಸೋಡಿಯಾ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದೇವೆ’ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.