ಲಖನೌ: ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ಅರವಿಂದ ಕೇಜ್ರಿವಾಲ್ ಅವರು ರಾಜೀನಾಮೆ ನೀಡುವುದು ಚುನಾವಣಾ ತಂತ್ರ ಎಂದು ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಅಧ್ಯಕ್ಷೆ ಮಾಯಾವತಿ ವ್ಯಂಗ್ಯವಾಡಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಅರವಿಂದ ಕೇಜ್ರಿವಾಲ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಚುನಾವಣಾ ಹಾಗೂ ರಾಜಕೀಯ ತಂತ್ರದ ಭಾಗವಾಗಿದೆ. ದೆಹಲಿ ಜನರು ಎದುರಿಸಿದ ಸಮಸ್ಯೆಗಳಿಗೆ ಕೇಜ್ರಿವಾಲ್ ಅವರು ಸುದೀರ್ಘ ಕಾಲ ಜೈಲಿನಲ್ಲಿದ್ದದ್ದೇ ಕಾರಣವೇ ಎಂದು ಪ್ರಶ್ನಿಸಿದ್ದಾರೆ.
ಲೆಫ್ಟಿನೆಂಟ್ ಗವರ್ನರ್ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆತಿಶಿ, ನೂತನ ಸರ್ಕಾರ ರಚಿಸಲು ಹಕ್ಕು ಮಂಡಿಸಿದ್ದೇವೆ. ದೆಹಲಿ ಜನರ ಹಿತಾಸಕ್ತಿಗಳನ್ನು ರಕ್ಷಿಸುತ್ತೇವೆ ಎಂದು ತಿಳಿಸಿದ್ದಾರೆ.
ದೆಹಲಿ ವಿಧಾನಸಭೆಯ ಅವಧಿ ಮುಂದಿನ ವರ್ಷ ಫೆಬ್ರುವರಿ 23ಕ್ಕೆ ಮುಕ್ತಾಯವಾಗಲಿದೆ. ಫೆಬ್ರುವರಿ ತಿಂಗಳ ಆರಂಭದಲ್ಲಿ ದೆಹಲಿ ವಿಧಾನಸಭೆಗೆ ಚುನಾವಣೆ ನಡೆಯಲಿದೆ.
‘ಜನರು ಪ್ರಾಮಾಣಿಕತೆಯ ಪ್ರಮಾಣ ಪತ್ರವನ್ನು ನೀಡಿದಾಗ ನಾನು ಮತ್ತೆ ಮುಖ್ಯಮಂತ್ರಿ ಹುದ್ದೆಯಲ್ಲಿ ಕುಳಿತುಕೊಳ್ಳುತ್ತೇನೆ‘.ಇನ್ನೆರಡು ದಿನದಲ್ಲಿ ರಾಜೀನಾಮೆ ನೀಡುತ್ತೇನೆ ಎಂದು ಕೇಜ್ರಿವಾಲ್ ಭಾನುವಾರ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.