ADVERTISEMENT

ಕೇಜ್ರಿವಾಲ್ ಚಪ್ಪಲಿಗಳು ದೆಹಲಿ ಆಡಳಿತ ನಡೆಸುತ್ತಿವೆ..: ಅತಿಶಿ ನಡೆಗೆ ಭೂಷಣ್ ಕಿಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಸೆಪ್ಟೆಂಬರ್ 2024, 13:22 IST
Last Updated 25 ಸೆಪ್ಟೆಂಬರ್ 2024, 13:22 IST
<div class="paragraphs"><p>ದೆಹಲಿ ಮುಖ್ಯಮಂತ್ರಿ ಅತಿಶಿ ಮರ್ಲೆನಾ ಸಿಂಗ್ </p></div>

ದೆಹಲಿ ಮುಖ್ಯಮಂತ್ರಿ ಅತಿಶಿ ಮರ್ಲೆನಾ ಸಿಂಗ್

   

ಪಿಟಿಐ ಚಿತ್ರ

ನವದೆಹಲಿ: ದೆಹಲಿಯ 8ನೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಆಡಳಿತಾರೂಢ ಎಎಪಿ ನಾಯಕಿ ಅತಿಶಿ ಅವರು, ಮುಖ್ಯಮಂತ್ರಿಯಾಗಿ ಕೇಜ್ರಿವಾಲ್ ಕೂರುತ್ತಿದ್ದ ಕುರ್ಚಿಯನ್ನು ಖಾಲಿ ಬಿಟ್ಟು, ಪಕ್ಕದಲ್ಲಿ ಮತ್ತೊಂದು ಕುರ್ಚಿಯಲ್ಲಿ ಕೂತಿರುವುದು ಈಗ ವ್ಯಾಪಕ ಟೀಕೆಗೆ ಒಳಗಾಗಿದೆ.

ADVERTISEMENT

ಅತಿಶಿ ನಡೆ ಕುರಿತು ಪ್ರತಿಕ್ರಿಯಿಸಿರುವ ಎಎಪಿಯ ಮಾಜಿ ಸದಸ್ಯ ಹಾಗೂ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಕಠಿಣ ಶಬ್ದಗಳಿಂದ ಟೀಕಿಸಿದ್ದಾರೆ. 

‘ಅವರು ಕೇಜ್ರಿವಾಲ್ ಅವರ ಚಪ್ಪಲಿಗಳನ್ನು ಮುಖ್ಯಮಂತ್ರಿ ಕುರ್ಚಿಯ ಮೇಲೆ ಇರಿಸಬಹುದು. ಅವುಗಳೇ ಸರ್ಕಾರ ನಡೆಸುತ್ತಿವೆ ಎಂದೂ ಎನ್ನಬಹುದು’ ಎಂದು ಟೀಕಿಸಿದ್ದಾರೆ.

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ತಕ್ಷಣ ಕಚೇರಿಗೆ ಬಂದ ಅತಿಶಿ, ಕೇಜ್ರಿವಾಲ್ ಕೂರುತ್ತಿದ್ದ ಕೆಂಪು ಕುರ್ಚಿಯ ಪಕ್ಕದಲ್ಲೇ ಬಿಳಿ ಬಣ್ಣದ ಕುರ್ಚಿಯನ್ನು ಹಾಕಿಕೊಂಡು ಕೂತರು. ‘ನಾನು ಈ ಜವಾಬ್ದಾರಿಯನ್ನು ಸ್ವೀಕರಿಸಿದ್ದೇನೆ. ಈ ಸಂದರ್ಭದಲ್ಲಿ ನನ್ನೊಳಗಿನ ಭಾವನೆಯು, ತ್ರೇತಾಯುಗದಲ್ಲಿ ಭಗವಾನ್ ರಾಮ 14 ವರ್ಷಗಳ ಕಾಲ ವನವಾಸಕ್ಕೆ ತೆರಳಿದ ನಂತರ, ಅವರ ಸಹೋದರ ಭರತ ಅಯೋಧ್ಯೆಯ ರಾಜ್ಯಭಾರ ನಡೆಸಿದಂತೆ’ ಎಂದಿದ್ದರು.

ರಾಮಾಯಣದಲ್ಲಿ ರಾಮ ವನವಾಸಕ್ಕೆ ತೆರಳಿದ ನಂತರ, ಅವರ ಪಾದುಕೆಗಳನ್ನು ತಂದ ಭರತ, ಅವುಗಳನ್ನು ಸಿಂಹಾಸನದ ಮೇಲಿಟ್ಟು ರಾಜ್ಯಭಾರ ಮಾಡಿದ್ದನು. ಅದರಂತೆಯೇ ನಾನು ಮುಂದಿನ ನಾಲ್ಕು ತಿಂಗಳು ಆಡಳಿತ ನಡೆಸುತ್ತೇನೆ ಎಂದಿದ್ದರು.

ಅತಿಶಿ ಅವರ ಈ ನಿರ್ಧಾರವನ್ನು ದೆಹಲಿಯ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚದೇವ್ ಅವರು ಟೀಕಿಸಿದ್ದಾರೆ. ‘ಇದು ಸಂವಿಧಾನವನ್ನು ಅವಮಾನಿಸಿದ ರೀತಿಯಾಗಿದೆ. ಒಂದೊಮ್ಮೆ ಅವರಿಗೆ ಆ ಕುರ್ಚಿಯಲ್ಲಿ ಕೂರಲು ಇಷ್ಟವಿಲ್ಲ ಎಂದಾದರೆ, ಮುಖ್ಯಮಂತ್ರಿ ಆಗಿದ್ದಾದರೂ ಏಕೆ? ಮುಖ್ಯಮಂತ್ರಿ ಗಾದಿಯಲ್ಲಿ ಅವರು ಕೂರಲಿಲ್ಲ ಎಂದಾದರೆ, ದೆಹಲಿಯಲ್ಲಿ ಕೆಲಸ ಮಾಡುವವರು ಯಾರು? ವಿದ್ಯುತ್ ಶುಲ್ಕ ಗಗನಮುಖಿಯಾಗಿದೆ. ಕುಡಿಯುವ ನೀರಿನ ಶುಲ್ಕ ಕಟ್ಟುವವರಾರು?’ ಎಂದು ಪ್ರಶ್ನಿಸಿದ್ದಾರೆ.

‘ಎಎಪಿ ಮುಖಂಡರು ಸಂವಿಧಾನವನ್ನು ಅಪಹಾಸ್ಯ ಮಾಡುವುದನ್ನು ನಿಲ್ಲಿಸಬೇಕು. ಅತಿಶಿ ಅವರು ಸಂವಿಧಾನವನ್ನು ಹಾಗೂ ಮುಖ್ಯಮಂತ್ರಿ ಸ್ಥಾನ ಎರಡನ್ನೂ ಅವಮಾನಿಸುತ್ತಿದ್ದಾರೆ‘ ಎಂದು ಆರೋಪಿಸಿದ್ದಾರೆ.

‘ಕೇಜ್ರಿವಾಲ್ ಅವರಿಗೆ ಹತ್ತಿರುವ ಕಳಂಕವನ್ನು ತೊಳೆಯುವಲ್ಲಿ ಎಎಪಿ ನಾಯಕರು ನಿರತರಾಗಿದ್ದಾರೆ. ಕೇಜ್ರಿವಾಲ್ ಅವರನ್ನು ಆದರ್ಶವಾದಿ ಎಂದೂ ಹಾಗೂ ಅತಿಶಿ ಅವರನ್ನು ಅಸಹಾಯಕಿ ಎಂದೂ ಬಿಂಬಿಸುವಲ್ಲಿ ನಿರತರಾಗಿದ್ದಾರೆ. ಇದೇನು ಮಾಸ್ಟರ್‌ಸ್ಟ್ರೋಕ್ ಅಲ್ಲ, ಜನರ ಭಾವನೆಗಳೊಂದಿಗೆ ಆಡುತ್ತಿರುವ ಆಟ’ ಎಂದು ಸಚ್‌ದೇವ್ ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.