ನವದೆಹಲಿ:ಕೇಂದ್ರೀಯ ಶಾಲೆಗಳಿಗೆ ಪ್ರತಿ ಶೈಕ್ಷಣಿಕ ವರ್ಷದಲ್ಲಿ 10 ವಿದ್ಯಾರ್ಥಿಗಳ ಪ್ರವೇಶಕ್ಕೆ ಶಿಫಾರಸು ಮಾಡುವ ಸಂಸದರ ಸವಲತ್ತನ್ನುಕೊನೆಗೊಳಿಸಬೇಕೇ ಎಂಬುದರ ಕುರಿತುರಾಜಕೀಯ ಪಕ್ಷಗಳ ಮುಖಂಡರ ಜೊತಗೆ ಸರ್ಕಾರ ಚರ್ಚೆ ನಡೆಸಲಿದೆ.
ಲೋಕಸಭೆಯಲ್ಲಿ ಸೋಮವಾರ ಈ ವಿಷಯ ಚರ್ಚೆಗೆ ಬಂದಿತು. ‘ಈ ತಾರತಮ್ಯದ ಕೋಟ ನಮಗೇಕೆ’ ಎಂದು ಪ್ರಶ್ನಿಸಿದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು,ಈ ಕುರಿತು ಸದನದ ರಾಜಕೀಯ ಪಕ್ಷಗಳ ನಾಯಕರ ಜತೆ ಸಭೆ ನಡೆಸುವಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಸೂಚಿಸಿದರು.
ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಈ ವಿಷಯವನ್ನು ಮೊದಲು ಸಭೆಯಲ್ಲಿ ಪ್ರಸ್ತಾಪಿಸಿದರು. ‘ಕೇಂದ್ರೀಯ ಶಾಲೆಗಳಲ್ಲಿನ 10 ಸೀಟುಗಳಿಗೆ ಶಿಫಾರಸು ಮಾಡುವುದಕ್ಕೆ ನಮಗೆ ಸಾರ್ವಜನಿಕರಿಗೆ ಹೆಚ್ಚಿನ ಮನವಿಗಳು ಬರುತ್ತಿವೆ. ಹಾಗಾಗಿ ಈ ಕೋಟಾವನ್ನು ಹೆಚ್ಚಿಸಿ ಇಲ್ಲವೇ, ಕೋಟಾವನ್ನೇ ಕೊನೆಗೊಳಿಸಿ’ ಎಂದು ತಿವಾರಿ ಹೇಳಿದರು.
ಆಗ ಪ್ರತಿಕ್ರಿಯಿಸಿದಸಚಿವ ಧರ್ಮೇಂದ್ರ ಪ್ರಧಾನ್,‘ಈ ಕುರಿತು ಸದನವು ಸರ್ವಾನುಮತದಿಂದ ಒಪ್ಪಿಗೆ ನೀಡಿದರೆ, ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತದೆ’ ಎಂದು ತಿಳಿಸಿದರು.
‘ನಾವು ಜನರ ಪ್ರತಿನಿಧಿಗಳೇ ಹೊರತು ಕೆಲವರ ಪ್ರತಿನಿಧಿಗಳಲ್ಲ’ ಎಂದು ಅವರು ಇದೇ ವೇಳೆ ಹೇಳಿದರು.
ಸಂಸದರ ಈ ಕೋಟಾ ಮೊದಲು ಪ್ರತಿ ಶೈಕ್ಷಣಿಕ ವರ್ಷಕ್ಕೆ 2 ಸೀಟುಗಳಿಗೆ ಸೀಮಿತವಾಗಿತ್ತು. ನಂತರ ಅದು ಐದು ಸೀಟುಗಳಿಗೆ ಏರಿಕೆಯಾಗಿತ್ತು. ಅದೀಗ 10 ಸೀಟುಗಳಿಗೆ ಏರಿದೆ ಎಂದು ಸಚಿವರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.