ತಿರುವನಂತಪುರ: ಯೂಟ್ಯೂಬ್ ನೋಡಿ ವೈನ್ ತಯಾರಿಸಿದ್ದ ಕೇರಳದ ಶಾಲಾ ಬಾಲಕನೊಬ್ಬ ಈಗ ಸಂಕಷ್ಟಕ್ಕೆ ಸಿಲುಕಿದ್ದಾನೆ. ವೈನ್ ಸೇವಿಸಿದ್ದ ಆತನ ಸಹಪಾಠಿ ಆಸ್ಪತ್ರೆಗೆ ದಾಖಲಾಗಿದ್ದು, ಈ ಸಂಬಂಧ ಸ್ಥಳೀಯ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
‘ಚಿರಾಯಿಂಕೀಜು ಸಮೀಪದ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಬಾಲಕ, ಮನೆಯಲ್ಲಿದ್ದ ದ್ರಾಕ್ಷಿಗಳನ್ನು ಬಳಸಿ ವೈನ್ ಸಿದ್ಧಪಡಿಸಿದ್ದ. ಅದನ್ನು ಬಾಟಲ್‌ವೊಂದರಲ್ಲಿ ತುಂಬಿಕೊಂಡು ಹೋಗಿ ತನ್ನ ಸಹಪಾಠಿಗಳಿಗೆ ನೀಡಿದ್ದ. ಅದನ್ನು ಕುಡಿದವರ ಪೈಕಿ ಒಬ್ಬ ವಾಂತಿ ಮಾಡಿಕೊಂಡಿದ್ದ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆತನ ಆರೋಗ್ಯ ಸ್ಥಿರವಾಗಿದ್ದು, ಆಸ್ಪತ್ರೆಯಿಂದ ಶುಕ್ರವಾರ ಬಿಡುಗಡೆ ಮಾಡಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
‘ಮನೆಯಲ್ಲಿದ್ದ ದ್ರಾಕ್ಷಿಗಳಿಂದ ವೈನ್ ತಯಾರಿಸಿದ್ದ ಬಾಲಕ, ಬಳಿಕ ಯೂಟ್ಯೂಬ್‌ನಲ್ಲಿ ತೋರಿಸಿದಂತೆಯೇ ಅದನ್ನು ನೆಲದಲ್ಲಿ ಹೂತಿಟ್ಟಿದ್ದ. ಅದರಲ್ಲಿ ಯಾವುದೇ ರೀತಿಯ ರಾಸಾಯನಿಕ ಬೆರೆಸಿಲ್ಲ ಎಂದು ವಿಚಾರಣೆ ವೇಳೆ ತಿಳಿಸಿದ್ದಾನೆ. ಆತ ಸಿದ್ಧಪಡಿಸಿದ್ದ ವೈನ್‌ನ ಮಾದರಿ ಸಂಗ್ರಹಿಸಿ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
‘ವೈನ್‌ನಲ್ಲಿ ರಾಸಾಯನಿಕ ಅಥವಾ ಇತರೆ ಯಾವುದಾದರೂ ದ್ರಾವಣ ಬೆರೆಸಿರುವುದು ದೃಢಪಟ್ಟರೆ ಬಾಲಕನ ವಿರುದ್ಧ ಬಾಲಾಪರಾಧ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುತ್ತದೆ. ಬಾಲಕನ ಪೋಷಕರು ಹಾಗೂ ಶಾಲಾ ಆಡಳಿತ ಮಂಡಳಿಯವರಿಗೂ ಈ ಕುರಿತ ಮಾಹಿತಿ ನೀಡಲಾಗಿದೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.