ತಿರುವನಂತಪುರ: ಕೇರಳದ ಉತ್ತರ ಪಾಲಕ್ಕಾಡ್ ಜಿಲ್ಲೆಯ ಪಿ. ಬಾಲಸುಬ್ರಮಣಿಯನ್ ಮೆನನ್ ಎನ್ನುವ ವ್ಯಕ್ತಿಯೊಬ್ಬರು ತಮ್ಮ 97ನೇ ವಯಸ್ಸಿನಲ್ಲಿಯೂ ವಕೀಲರಾಗಿ ಕೆಲಸ ಮಾಡುವ ಮೂಲಕ ‘ದೀರ್ಘಕಾಲ ವಕೀಲರಾಗಿ ಸೇವೆ ಸಲ್ಲಿಸಿದ ಪುರುಷ’ ಎನ್ನುವ ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
2023ರ ಸೆಪ್ಟೆಂಬರ್11 ಕ್ಕೆ ಬಾಲಸುಬ್ರಮಣಿಯನ್ ಅವರು ವಕೀಲರಾಗಿ ವೃತ್ತಿ ಆರಂಭಿಸಿ ಬರೋಬ್ಬರಿ 73 ವರ್ಷ 60 ದಿನಗಳಾಗುತ್ತವೆ ಎಂದು ಗಿನ್ನಿಸ್ ವಿಶ್ವ ದಾಖಲೆ ತಿಳಿಸಿದೆ.
97 ವರ್ಷ ವಯಸ್ಸಾದರೂ ಬಾಲಸುಬ್ರಮಣಿಯನ್ ಅವರು ವೃತ್ತಿ ಜೀವನದಲ್ಲಿ ಸಕ್ರಿಯರಾಗಿದ್ದು, ಪ್ರತಿದಿನ ಕಚೇರಿಗೆ ಮತ್ತು ನ್ಯಾಯಾಲಯಕ್ಕೆ ತೆರಳಿ ಕಕ್ಷಿದಾರರನ್ನು ಭೇಟಿ ಮಾಡುತ್ತಾರೆ.
‘ಕಕ್ಷಿದಾರರು ನನ್ನ ಬಳಿ ಪ್ರಕರಣದ ಪ್ರಸ್ತಾವ ಇಟ್ಟಿದ್ದಾರೆ ಎಂದರೆ, ಅವರಿಗೆ ನನ್ನ ಮೇಲೆ ನಂಬಿಕೆ ಇದೆ ಎಂದರ್ಥ, ಹೀಗಾಗಿ ಅವರಿಗೆ ಎಷ್ಟು ನೆರವಾಗಲು ಸಾಧ್ಯವೋ ಅಷ್ಟು ಮಾಡುತ್ತೇನೆ’ ಎನ್ನುತ್ತಾರೆ.
ಪಾಲಕ್ಕಾಡ್‌ನ ಸಾಂಪ್ರದಾಯಿಕ ಕುಟುಂಬದಿಂದ ಬಂದಿರುವ ಇವರು, ನ್ಯಾಯಾಲಯಗಳಲ್ಲಿ ಹೆಚ್ಚು ವಾದಿಸುವುದರಲ್ಲಿ ನಂಬಿಕೆಯಿಲ್ಲ ಎನ್ನುತ್ತಾರೆ. ಅಲ್ಲದೆ ಅವರ ವಾದ ಮತ್ತು ಅಡ್ಡ ಪರೀಕ್ಷೆಗಳು ಕೂಡ ಯಾವಾಗಲೂ ಚಿಕ್ಕದಾಗಿರುತ್ತವೆ.
ಕಾನೂನಿನಲ್ಲಿ ಪದವಿ ಪಡೆದ ಬಳಿಕ ಬಾಲಸುಬ್ರಮಣಿಯನ್ ಅವರು 1950ರಲ್ಲಿ ತಮ್ಮ ವಕೀಲ ವೃತ್ತಿಯನ್ನು ಆರಂಭಿಸಿದ್ದರು. ‘ನೀವು ಯಾವಾಗ ನಿವೃತ್ತಿಯಾಗುತ್ತೀರಿ? ಎಂದು ಕೇಳಿದರೆ, ‘ಎಲ್ಲಿಯವರೆಗೆ ನನ್ನ ಆರೋಗ್ಯ ಸಹಕರಿಸುವುದೋ ಅಲ್ಲಿಯವರೆಗೆ ನನ್ನ ಕಕ್ಷಿದಾರರನ್ನು ಭೇಟಿಯಾಗುತ್ತೇನೆ’ ಎನ್ನುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.