ADVERTISEMENT

ಕೇರಳ | ಶಾಸಕ, ನಟ ಮುಕೇಶ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು

ಪಿಟಿಐ
Published 29 ಆಗಸ್ಟ್ 2024, 3:26 IST
Last Updated 29 ಆಗಸ್ಟ್ 2024, 3:26 IST
<div class="paragraphs"><p>ಮುಕೇಶ್</p></div>

ಮುಕೇಶ್

   

(ಚಿತ್ರ ಕೃಪೆ/@mukeshcineactor)

ಕೊಚ್ಚಿ: ‘ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ ಎಂದು ನಟಿಯೊಬ್ಬರು ನೀಡಿದ್ದ ದೂರು ಆಧರಿಸಿ ಮಲಯಾಳ ಚಿತ್ರನಟ, ಆಡಳಿತಾರೂಢ ಸಿಪಿಎಂ ಶಾಸಕ ಎಂ.ಮುಕೇಶ್ ವಿರುದ್ಧ ಪೊಲೀಸರು ಗುರುವಾರ ಅತ್ಯಾಚಾರ ಪ್ರಕರಣವನ್ನು ದಾಖಲಿಸಿದ್ದಾರೆ.

ADVERTISEMENT

ನಟ ಜಯಸೂರ್ಯ ವಿರುದ್ಧವೂ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿರುವ ಪೊಲೀಸರು, ಈ ಕುರಿತು ತನಿಖೆಯನ್ನು ಚುರುಕುಗೊಳಿಸಿದ್ದಾರೆ. 

ಮುಕೇಶ್ ವಿರುದ್ಧ ಕೊಚ್ಚಿ ನಗರದ ಮರಡು ಠಾಣೆಯಲ್ಲಿ ಐಪಿಸಿ ಸೆಕ್ಷನ್ 376ರ ಅನ್ವಯ ಎಫ್‌ಐಆರ್‌ ದಾಖಲಿಸಿದೆ. ಹೊಸ ಭಾರತೀಯ ನ್ಯಾಯ ಸಂಹಿತೆಗೆ ಜಾರಿಗೆ ಬರುವ ಮೊದಲೇ, ಈ ಕೃತ್ಯ ನಡೆದಿರುವ ಕಾರಣ ಐಪಿಸಿ ಪ್ರಕಾರ, ಪ್ರಕರಣ ದಾಖಲಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಮಲಯಾಳ ಚಿತ್ರರಂಗದಲ್ಲಿ ಲೈಂಗಿಕ ದೌರ್ಜನ್ಯ ಕುರಿತು ನ್ಯಾಯಮೂರ್ತಿ ಹೇಮಾ ಸಮಿತಿ ವರದಿ ಬಳಿಕ ದಾಖಲಾಗಿರುವ 3ನೇ ಎಫ್‌ಐಆರ್‌ ಇದಾಗಿದೆ. ಈ ಹಿಂದೆ ನಟ ಸಿದ್ದೀಕ್‌ ಮತ್ತು ನಿರ್ದೇಶಕ ರಂಜಿತ್ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ರಂಜಿತ್ ವಿರುದ್ಧ  ಪಶ್ಚಿಮ ಬಂಗಾಳದ ನಟಿಯೊಬ್ಬರು 2009ರಲ್ಲಿ ನಡೆದಿದ್ದ ಕೃತ್ಯಕ್ಕೆ ಸಂಬಂಧಿಸಿದಂತೆ ದೂರು ನೀಡಿದ್ದರು. 

ಆರೋಪ ಕೇಳಿಬಂದ ಹಿಂದೆಯೇ ರಂಜಿತ್ ಅವರು ಕೇರಳ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಇನ್ನೊಂದೆಡೆ, ಸಿದ್ದೀಕ್‌ ಅವರು ಮಲಯಾಳ ಸಿನಿಮಾ ಕಲಾವಿದರ ಸಂಘದ (ಅಮ್ಮ) ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 

2017ರ ನಟಿಯೊಬ್ಬರ ಮೇಲಿನ ಹಲ್ಲೆ ಕೃತ್ಯ ಕುರಿತು ಕೇರಳ ಸರ್ಕಾರ ನ್ಯಾಯಮೂರ್ತಿ ಹೇಮಾ ನೇತೃತ್ವದ ಸಮಿತಿ ರಚಿಸಿತ್ತು. ಸಮಿತಿಯ ವರದಿ ವಿವರಗಳು ಈಚೆಗೆ ಪ್ರಕಟವಾಗಿದ್ದು, ಮಲಯಾಳ ಚಿತ್ರನಟಿಯರ ಮೇಲೆ ಲೈಂಗಿಕ ದೌರ್ಜನ್ಯ, ಶೋಷಣೆ ಕೃತ್ಯಗಳು ನಡೆದಿವೆ ಎಂದು ಉಲ್ಲೇಖಿಸಿತ್ತು.

ಚಿತ್ರರಂಗದ ಹಲವು ನಟರು, ನಿರ್ದೇಶಕರ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಶೋಷಣೆ ‌ಆರೋಪಗಳ ಹಿನ್ನೆಲೆಯಲ್ಲಿ ತನಿಖೆಗಾಗಿ ರಾಜ್ಯ ಸರ್ಕಾರ ಇತ್ತೀಚೆಗೆ ಏಳು ಸದಸ್ಯರ ಸಮಿತಿಯನ್ನು ರಚಿಸಿದೆ. ಸಮಿತಿ ರಚನೆಯ ಬಳಿಕ ನಟ, ನಿರ್ದೇಶಕರ ವಿರುದ್ಧ ಹಲವು ದೂರುಗಳು ದಾಖಲಾಗಿವೆ.

ಸಾಬೀತಾದರೆ ಶಾಸಕನಾಗಿ ಮುಂದುವರಿಯುವ ಹಕ್ಕಿಲ್ಲ: ಶೈಲಜಾ 

‘ಮುಕೇಶ್‌ ವಿರುದ್ಧದ ಆರೋಪ ಸಾಬೀತಾದಲ್ಲಿ ಅವರಿಗೆ ಶಾಸಕರಾಗಿರುವ ಹಕ್ಕುಇರುವುದಿಲ್ಲ’ ಎಂದು ಸಿಪಿಐ (ಎಂ) ಪಕ್ಷದ ನಾಯಕಿ ಮಾಜಿ ಸಚಿವೆ ಕೆ.ಕೆ.ಶೈಲಜಾ ಹೇಳಿದರು.   ‘ವಿಶೇಷ ತನಿಖಾ ತಂಡ  ಒಮ್ಮೆ ವರದಿ ಸಲ್ಲಿಸಿದ ಬಳಿಕ ಸರ್ಕಾರ ಸೂಕ್ತ ಕ್ರಮಕೈಗೊಳ್ಳಲಿದೆ. ತನಿಖೆ ಇನ್ನೂ ಪ್ರಾಥಮಿಕ ಹಂತದಲ್ಲಿದೆ. ರಾಜೀನಾಮೆ ಕುರಿತು ಈ ಹಂತದಲ್ಲಿ ಹೇಳಲಾಗದು’ ಎಂದರು. ‘ರಾಜ್ಯ ಸರ್ಕಾರ ಈ ವಿಷಯದಲ್ಲಿ ಯಾರನ್ನೂ ರಕ್ಷಿಸುವುದಿಲ್ಲ ಹಾಗೂ ಯಾರೊಬ್ಬರ ಪರವಾಗಿ ಪಕ್ಷಪಾತವನ್ನು ಎಸಗುವುದಿಲ್ಲ’ ಎಂದು ಅವರು ಅಭಿಪ್ರಾಯಪಟ್ಟರು.

‘ಕಾಂಗ್ರೆಸ್ ಮೊದಲು ತನ್ನ ಶಾಸಕರಿಂದ ರಾಜೀನಾಮೆ ಕೊಡಿಸಲಿ‘ 

ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ನಟ ಸಿಪಿಐ (ಎಂ) ಶಾಸಕ ಎಂ.ಮುಕೇಶ್ ಅವರ ಬೆಂಬಲಕ್ಕೆ ಆಡಳಿತಾರೂಢ ಮೈತ್ರಿಕೂಟ ಎಲ್‌ಡಿಎಫ್‌ ನಿಂತಿದೆ. ಮುಕೇಶ್‌ ಅವರ ರಾಜೀನಾಮೆ ಕೇಳುವ ಮೊದಲು ಲೈಂಗಿಕ ದೌರ್ಜನ್ಯ ಎಸಗಿದ ಆರೋಪವಿರುವ ಇಬ್ಬರು ಕಾಂಗ್ರೆಸ್‌ ಶಾಸಕರು ರಾಜೀನಾಮೆ ನೀಡಬೇಕು ಎಂದು ಎಲ್‌ಡಿಎಫ್‌ ಪ್ರತಿಕ್ರಿಯಿಸಿದೆ.

ಸುದ್ದಿಗಾರರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದ ಅವರು ಕಾಂಗ್ರೆಸ್‌ ಶಾಸಕರಾದ ಎಂ.ವಿನ್ಸೆಂಟ್‌ ಮತ್ತು ಇ.ಕುನ್ನಪ್ಪಿಳ್ಳಿ ವಿರುದ್ಧದ ಆರೋಪಗಳನ್ನು ಉಲ್ಲೇಖಿಸಿ ಈ ಮಾತು ಹೇಳಿದರು. ಎಲ್‌ಡಿಎಫ್‌ ಸಂಚಾಲಕ ಇ.ಪಿ.ಜಯರಾಜನ್ ಸಿಪಿಐ (ಎಂ) ಪಕ್ಷ ಅಥವಾ ಸರ್ಕಾರ ತಪ್ಪೆಸಗಿರುವ ಯಾವುದೇ ನಟ ನಿರ್ದೇಶಕರನ್ನು ರಕ್ಷಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

ಮಲಯಾಳ ಚಿತ್ರರಂಗದಲ್ಲಿ ನಟಿಯರನ್ನು ದ್ವಿತೀಯ ದರ್ಜೆ ನಾಗರಿಕರಂತೆ ನೋಡುವ ಸ್ಥಿತಿ ಇದ್ದರೆ ಸೂಕ್ತ ಕ್ರಮ ಜರುಗಿಸುವುದು ಸರ್ಕಾರದ ಹೊಣೆ. ಆದರೆ ನ್ಯಾ.ಹೇಮಾ ವರದಿ ಸಂಬಂಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ.
ವಿ.ಮರಳೀಧರನ್‌. ಬಿಜೆಪಿ ನಾಯಕ ಕೇಂದ್ರದ ಮಾಜಿ ಸಚಿವ
ಅತ್ಯಾಚಾರ ಪ್ರಕರಣದ ಆರೋಪಿ ನಟ ಸಿಪಿಐ (ಎಂ) ಶಾಸಕ ಎಂ.ಮುಕೇಶ್‌ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್‌ ಒತ್ತಾಯಿಸಿದೆ. ಮುಕೇಶ್‌ ಮತ್ತು ಅವರ ಪಕ್ಷವೇ ಈ ಬಗ್ಗೆ ತೀರ್ಮಾನಿಸಬೇಕು.
ವಿ.ಡಿ.ಸತೀಶನ್‌, ವಿಧಾನಸಭೆ ವಿರೋಧಪಕ್ಷದ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.