ಮಳೆ ಮತ್ತು ಪ್ರವಾಹದಿಂದ ನಲುಗಿದ್ದ ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಮತ್ತೆ ಮಳೆಯಾಗುವ ಭೀತಿ ಎದುರಾಗಿದೆ. ಒಡಿಶಾದಲ್ಲೂ ಭಾರಿ ಮಳೆಯ ಮುನ್ಸೂಚನೆ ನೀಡಲಾಗಿದೆ. ಕರ್ನಾಟಕ ಹಾಗೂ ಗುಜರಾತಿನಲ್ಲಿ ಪ್ರವಾಹ ತಗ್ಗಿದ್ದು, ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆ ಚುರುಕು ಪಡೆದಿವೆ. ಕೊಲ್ಹಾಪುರ, ಸಾಂಗ್ಲಿಯಲ್ಲಿ ಪರಿಹಾರ ಕಾರ್ಯ ಬಹುತೇಕ ಮುಕ್ತಾಯವಾಗಿದೆ
3 ಜಿಲ್ಲೆಗಳಲ್ಲಿ ರೆಡ್ ಅಲರ್ಟ್
ಕೇರಳದ ಉತ್ತರ ಭಾಗ ಸಹಜ ಸ್ಥಿತಿಗೆ ಬರುತ್ತಿದ್ದಂತೆಯೇ ಕೇಂದ್ರ ಭಾಗದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಬಂದಿದೆ. ಹೀಗಾಗಿ ಆಲಪ್ಪುಳ, ಎರ್ನಾಕುಲಂ, ಇಡುಕ್ಕಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದು, 20 ಸೆಂಟಿಮೀಟರ್‌ನಷ್ಟು ಮಳೆಯಾಗುವ ಸಾಧ್ಯತೆಯಿದೆ. ಕೊಲ್ಲಂ, ಪಟ್ಟನಂತಿಟ್ಟ, ಕೊಟ್ಟಾಯಂ, ಪಾಲಕ್ಕಾಡ್, ತ್ರಿಶೂರ್, ಮಲಪ್ಪುರ ಹಾಗೂ ವಯನಾಡ್ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ನೀಡಲಾಗಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ವಯನಾಡ್, ಮಲಪ್ಪುರದ ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿ ಸಂತ್ರಸ್ತರ ಜೊತೆ ಮಾತನಾಡಿದರು.ಭೂಕುಸಿತಕ್ಕೆ ನಲುಗಿರುವ ಕವಳಪ್ಪಾರ ಹಾಗೂ ಕೊಟ್ಟಕುನ್ನು ಎಂಬಲ್ಲಿ ಮೃತದೇಹಗಳಿಗಾಗಿ ಶೋಧ ನಡೆಯುತ್ತಿದೆ. ಇಲ್ಲಿ 40 ಮಂದಿಯ ಸುಳಿವಿಲ್ಲ.
(ಮಲಪ್ಪುರಂ ಜಿಲ್ಲೆಯ ಮುತ್ತಪ್ಪನ್‌ಕುನ್ನು ಪ್ರದೇಶದಲ್ಲಿ ಭೂಕುಸಿತ ಉಂಟಾಗಿದ್ದು, ಹಲವು ಮನೆಗಳು ನಾಶಗೊಂಡಿವೆ - –ಪಿಟಿಐ ಚಿತ್ರಗಳು)
ಒಡಿಶಾದಲ್ಲಿ ಮಳೆ; ಪ್ರವಾಹ ಭೀತಿ
ಒಡಿಶಾದ ಕಂಧಮಾಲ್, ಸೋನೆಪುರ ಸೇರಿದಂತೆ ಹಲವು ಭಾಗಗಳಲ್ಲಿ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಪ್ರವಾಹದ ಭೀತಿ ಶುರುವಾಗಿದೆ. ಕಳೆದ 15 ದಿನಗಳಲ್ಲಿ 8 ಜನರು ಬಲಿಯಾಗಿದ್ದಾರೆ. ಹಳಿಗಳ ಮೇಲೆ ನೀರು ಹರಿಯುತ್ತಿದ್ದು, ರೈಲು ಸಂಚಾರ ವ್ಯತ್ಯಯಗೊಂಡಿದೆ.
ವಾಯುಭಾರ ಕುಸಿತದ ಕಾರಣ ಮುಂದಿನ 3 ದಿನಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ತಗ್ಗು ಪ್ರದೇಶಗಳ ಜನರನ್ನು ಸ್ಥಳಾಂತರ ಮಾಡಲಾಗಿದೆ. ಎನ್‌ಡಿಆರ್‌ಎಫ್ ತಂಡವನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ.
ಕರಾವಳಿಯಲ್ಲಿ ಗಂಟೆಗೆ 45 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದೆ. ಹಿರಾಕುಡ್ ಜಲಾಶಯದ ನೀರಿನ ಮಟ್ಟ ಈಗಾಗಲೇ 616 ಅಡಿಗೆ ಏರಿಕೆಯಾಗಿದೆ. (ಗರಿಷ್ಠ 630 ಅಡಿ) ಬುಧವಾರ ಜಲಾಶಯದಿಂದ ನೀರು ಹರಿಸಲಾಗುತ್ತಿದೆ.
(ವಿಜಯವಾಡದಲ್ಲಿ ಕೃಷ್ಣಾ ನದಿ ಪ್ರವಾಹದಲ್ಲೇ ದಡ ಸೇರಲು ಯತ್ನಿಸುತ್ತಿರುವ ಜನ–ಪಿಟಿಐ ಚಿತ್ರ)
ಮಹಾರಾಷ್ಟ್ರ: ಮಳೆ ಮುನ್ಸೂಚನೆ
ಮಹಾರಾಷ್ಟ್ರದ ಪುಣೆ, ಕೊಲ್ಹಾಪುರ ಹಾಗೂ ಸತಾರ ಜಿಲ್ಲೆಗಳಲ್ಲಿ ಬುಧವಾರ ಅತ್ಯಧಿಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಸಾಂಗ್ಲಿ, ಕೊಲ್ಹಾಪುರ ಜಿಲ್ಲೆಗಳು ಸಹಜಸ್ಥಿತಿಗೆ ಮರಳುತ್ತಿರುವ ಮಧ್ಯೆಯೇ ಮತ್ತೆ ಮಳೆ ಭೀತಿ ಆವರಿಸಿದೆ. ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿ ಕೊಯ್ನಾ,ವರನಾ, ರಾಧಾನಗರಿ ಸೇರಿದಂತೆ ಹಲವು ಜಲಾಶಯಗಳು ತುಂಬಿವೆ.
₹6,813 ಕೋಟಿ ನೆರವಿಗೆ ಮನವಿ
ಮಹಾರಾಷ್ಟ್ರದಲ್ಲಿ ಸುರಿದಿರುವ ಮಳೆ ಹಾಗೂ ಪ್ರವಾಹದಿಂದ ಆಗಿರುವ ಹಾನಿ ಪರಿಹಾರಕ್ಕೆ ₹6,813 ಕೋಟಿ ಪರಿಹಾರ ಪ್ಯಾಕೇಜ್ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಹೇಳಿದ್ದಾರೆ.
ಸಾಂಗ್ಲಿ ಮತ್ತು ಕೊಲ್ಹಾಪುರ ಜಿಲ್ಲೆಗಳಲ್ಲಿ ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡಿದೆ. ಪೆಟ್ರೋಲ್, ಡೀಸೆಲ್, ಎಲ್‌ಪಿಜಿ ಪೂರೈಕೆ ಸಹಜಸ್ಥಿತಿಗೆ ಮರಳಿದೆ. ವಿದ್ಯುತ್ ಹಾಗೂ ದೂರವಾಣಿ ಸಂಪರ್ಕ ಸರಿಪಡಿಸಲು ಸಮರೋಪಾದಿಯಲ್ಲಿ ಕೆಲಸ ನಡೆಯುತ್ತಿದೆ.
ಆದರೆ ಪ್ರಮುಖ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಮುಖ್ಯಮಂತ್ರಿ ಹಾಗೂ ಸಚಿವರು ತಮ್ಮ ಒಂದು ತಿಂಗಳ ವೇತನವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲು ನಿರ್ಧರಿಸಿದ್ದಾರೆ.
(ಕೇರಳದ ಕೋಯಿಕ್ಕೋಡ್ ಜಿಲ್ಲೆಯ ಕನ್ನಡಿಕಲ್ ಎಂಬಲ್ಲಿ ಪ್ರವಾಹ ಇಳಿಕೆಯಾಗಿದ್ದು, ಮನೆಯ ವಸ್ತುಗಳನ್ನು ಸ್ವಚ್ಚಗೊಳಿಸುತ್ತಿರುವ ದೃಶ್ಯ–ಪಿಟಿಐ ಚಿತ್ರ)
ಅನಿವಾಸಿ ಭಾರತೀಯರ ದೇಣಿಗೆ
ಪ್ರವಾಹದಿಂದ ನೆಲೆ ಕಳೆದುಕೊಂಡಿರುವ ಸಾವಿರಾರು ಕೇರಳಿಯನ್ನರ ನೋವಿಗೆ ಅನಿವಾಸಿ ಭಾರತೀಯರು ಸ್ಪಂದಿಸಿದ್ದಾರೆ. ವಾಯ್ಸ್ ಆಫ್ ಹ್ಯೂಮ್ಯಾನಿಟಿ ಹಾಗೂ ಕೇರಳ ಮುಸ್ಲಿಂ ಸಾಂಸ್ಕೃತಿಕ ಕೇಂದ್ರವು ಸಂತ್ರಸ್ತರಿಗೆ ಪರಿಹಾರ ಸಾಮಗ್ರಿಗಳನ್ನು ಸಂಗ್ರಹಿಸಲು ಕೇಂದ್ರಗಳನ್ನು ತೆರೆದಿವೆ. ಹೊದಿಕೆ, ಬಟ್ಟೆ, ಬಾಳಿಕೆಬರುವ ಆಹಾರ ಪದಾರ್ಥಗಳನ್ನು ನೀಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಲಾಗಿದೆ.
ಆಪರೇಷನ್ ‘ವರ್ಷ ರಾಹತ್’
ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾದಲ್ಲಿ ಕಳೆದ 7 ದಿನಗಳಲ್ಲಿ ಪ್ರವಾಹಕ್ಕೆ ಸಿಲುಕಿದ್ದ 14,000 ಜನರನ್ನು ಭಾರತೀಯ ವಾಯುಪಡೆ ರಕ್ಷಣೆ ಮಾಡಿದೆ. ‘ಆಪರೇಷನ್ ವರ್ಷ ರಾಹತ್’ ಹೆಸರಿನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವಾಯುಪಡೆಯ41 ತಂಡಗಳನ್ನು ನಿಯೋಜಿಸಲಾಗಿತ್ತು. ಆಧುನಿಕ ಹಗುರ ಹೆಲಿಕಾಪ್ಟರ್‌ಗಳು, ದೋಣಿಗಳ ಮೂಲಕ ಜನರನ್ನು ರಕ್ಷಿಸಲಾಗಿದೆ. ಬೆಳಗಾವಿ ಹಾಗೂ ಹಂಪಿಯಲ್ಲಿ ಐಎಎಫ್ ತಂಡಗಳನ್ನು ನಿಯೋಜಿಸಿಲಾಗಿದೆ.
ಮೆಟ್ಟೂರು ಜಲಾಶಯದಿಂದ ಕೃಷಿಗೆ ನೀರು
ಮಹದೇಶ್ವರ ಬೆಟ್ಟ: ಕಾವೇರಿ ನದಿಯಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿರುವುದರಿಂದ, ತಮಿಳುನಾಡಿನ ಮೆಟ್ಟೂರು ಜಲಾಶಯದ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆಯಾಗಿದೆ.
120 ಅಡಿ ಎತ್ತರದ ಜಲಾಶಯದಲ್ಲಿ ಮಂಗಳವಾರದವರೆಗೆ 105 ಅಡಿ ನೀರು ಸಂಗ್ರಹವಾಗಿದೆ. ಸಂಜೆ ಹೊತ್ತಿಗೆ ಜಲಾಶಯದ ಒಳಹರಿವು 2 ಲಕ್ಷ ಕ್ಯುಸೆಕ್ ಇತ್ತು. 10 ಸಾವಿರ ಕ್ಯುಸೆಕ್ ಅನ್ನು ನದಿಗೆ ಬಿಟ್ಟಿದ್ದರೆ, 500 ಕ್ಯುಸೆಕ್ ನೀರನ್ನು ಕಾಲುವೆಗೆ ಹರಿಸಲಾಗಿದೆ.
ನೀರು ಹರಿಸಿರುವುದು ತಮಿಳುನಾಡಿನ ರೈತರಲ್ಲಿ ಮಂದಹಾಸ ಮೂಡಿಸಿದೆ. 16 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಇದರಿಂದ ಅನುಕೂಲವಾಗಲಿದೆ ಎಂದು ಹೇಳಲಾಗಿದೆ.
ಬಾಗಿನ ಅರ್ಪಣೆ: ಅಣೆಕಟ್ಟೆ ಬಹುತೇಕ ಭರ್ತಿಯಾಗಿರುವುದರಿಂದ ಮುಖ್ಯಮಂತ್ರಿ ಎಡಪ್ಪಾಡಿ ಕೆ.ಪಳನಿಸ್ವಾಮಿ ಜಲಾಶಯಕ್ಕೆ ಬಾಗಿನ ಅರ್ಪಿಸಿದರು. ಆ ಬಳಿಕ, ನದಿಗೆ ನೀರು ಹರಿಸಲಾಯಿತು.
ಒಳಉಡುಪು ನೀಡಿ ಎಂದವನ ಬಂಧನ
ಪರಿಹಾರ ಶಿಬಿರಗಳಲ್ಲಿ ಇರುವ ಪ್ರವಾಹ ಸಂತ್ರಸ್ತ ಮಹಿಳೆಯರ ಬಳಕೆಗೆ ಒಳಉಡುಪುಗಳನ್ನು ನೀಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದ ಸಾಮಾಜಿಕ ಕಾರ್ಯಕರ್ತ ರಘು ಇರವಿಪೆರೂರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.
ಮಹಿಳೆಯರ ಘನತೆಗೆ ಧಕ್ಕೆಯಾಗಿದೆ ಎಂದು ಆರೋಪಿಸಿ ಪಟ್ಟನಂತಿಟ್ಟ ಜಿಲ್ಲೆಯ ತಿರುವಳ್ಳ ಪುರಸಭೆ ಸದಸ್ಯೆಯೊಬ್ಬರು ದೂರು ನೀಡಿದ್ದರು. ‘ತಮ್ಮ ಸಂದೇಶದಲ್ಲಿ ಯಾವುದೇ ಕೆಟ್ಟ ಉದ್ದೇಶ ಇರಲಿಲ್ಲ. ಪರಿಹಾರ ಕೇಂದ್ರಕ್ಕೆ ತೆರಳಿ ಅಲ್ಲಿನ ಅಗತ್ಯಗಳನ್ನು ಅರಿತುಕೊಂಡೇ ಮನವಿ ಮಾಡಿದ್ದೆ’ ಎಂದು ರಘು ಸಮರ್ಥಿಸಿಕೊಂಡಿದ್ದಾರೆ.
ಪ್ರಾಣ ತೆತ್ತ ಯುವಕನಿಗೆ ಗೌರವದ ಮಹಾಪೂರ
ಕೇರಳದಲ್ಲಿ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿದ್ದ ವೇಳೆ ಪ್ರವಾಹದ ನೀರಿನಲ್ಲಿ ಕೊಚ್ಚಿಹೋದ 34 ವರ್ಷದ ಯುವಕ ಲಿನು ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಗೌರವದ ಮಹಾಪೂರ ಹರಿದುಬಂದಿದೆ.
ಕೋಯಿಕ್ಕೋಡ್‌ನ ಲಿನು ಅವರು ತಮ್ಮ ತಂದೆತಾಯಿಯರನ್ನು ಸುರಕ್ಷಿತವಾಗಿ ಪರಿಹಾರ ಕೇಂದ್ರಕ್ಕೆ ತಲುಪಿಸಿದ ಬಳಿಕ ಇತರರನ್ನು ರಕ್ಷಿಸಲು ತೆರಳಿದ್ದರು. ರಕ್ಷಣಾ ಕಾರ್ಯಾಚರಣೆ ವೇಳೆ ಅವರು ಪ್ರವಾಹಕ್ಕೆ ಸಿಲುಕಿದ್ದರೂ ಉಳಿದವರ ಗಮನಕ್ಕೆ ಬಂದಿರಲಿಲ್ಲ. ಲಿನು ಕಣ್ಮರೆಯಾಗಿದ್ದು ತಿಳಿಯುತ್ತಲೇ ಶೋಧ ನಡೆಸಲಾಯಿತು. ಕೊಚ್ಚಿಹೋಗಿದ್ದ ಅವರ ಮೃತದೇಹ ಸಿಕ್ಕಿತು.
ಸ್ವಯಂಪ್ರೇರಣೆಯಿಂದ ರಕ್ಷಣೆಗೆ ಇಳಿದಿದ್ದ ಲಿನು ಅವರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದು, ಅವರು ಇತರರಿಗೆ ಸ್ಫೂರ್ತಿಯಾಗಿದ್ದಾರೆ ಎಂದು ಕೇರಳ ಹಣಕಾಸು ಸಚಿವ ಥಾಮಸ್ ಸ್ಮರಿಸಿದ್ದಾರೆ.
210
ಕರ್ನಾಟಕ, ಕೇರಳ, ಗುಜರಾತ್, ಮಹಾರಾಷ್ಟ್ರದಲ್ಲಿ ಸಾವಿನ ಸಂಖ್ಯೆ
88
ಕೇರಳದಲ್ಲಿ ಸಾವಿನ ಸಂಖ್ಯೆ
14,000
ಪ್ರವಾಹ ಸಂತ್ರಸ್ತ ಜನರನ್ನು ರಕ್ಷಿಸಿದ ವಾಯುಪಡೆ
3,115
ಕರ್ನಾಟಕದಲ್ಲಿ ವಾಯುಪಡೆ ರಕ್ಷಿಸಿದ ಜನರ ಸಂಖ್ಯೆ
608 ಮಿ.ಮೀ
ಒಡಿಶಾದ ಕರ್ಲಮುಂಡಾದಲ್ಲಿ ಸೋಮವಾರದಿಂದ ಸುರಿದ ಮಳೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.