ADVERTISEMENT

ಮೂರು ಕ್ಷೇತ್ರಗಳಲ್ಲಿ ಯುಡಿಎಫ್, ಎರಡು ಕ್ಷೇತ್ರಗಳಲ್ಲಿ ಎಲ್‌ಡಿಎಫ್ ಭರ್ಜರಿ ಗೆಲುವು

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2019, 12:04 IST
Last Updated 24 ಅಕ್ಟೋಬರ್ 2019, 12:04 IST
ಕೇರಳ ಉಪಚುನಾವಣೆ
ಕೇರಳ ಉಪಚುನಾವಣೆ   

ತಿರುವನಂತಪುರ: ಕೇರಳದ 5 ವಿಧಾನಸಭಾ ಕ್ಷೇತ್ರಗಳಉಪಚುನಾವಣೆಯಲ್ಲಿಕೊನ್ನಿ, ವಟ್ಟಿಯೂರ್‌ಕಾವ್ ವಿಧಾನಸಭಾ ಕ್ಷೇತ್ರಗಳಲ್ಲಿ ಎಲ್‌ಡಿಎಫ್,ಎರ್ನಾಕುಳಂ, ಮಂಜೇಶ್ವರ ಮತ್ತುಆರೂರ್ವಿಧಾನಸಭಾ ಕ್ಷೇತ್ರಗಳಲ್ಲಿ ಯುಡಿಎಫ್ಗೆಲುವು ಸಾಧಿಸಿದೆ.

ಆರೂರ್ ಚುನಾವಣಾ ಕ್ಷೇತ್ರದಲ್ಲಿ ಯುಡಿಎಫ್ 2,079 ಮತಗಳ ಅಂತರದಲ್ಲಿ ಗೆಲ್ಲುವ ಮೂಲಕ ಎಲ್‌ಡಿಎಫ್‌ಗೆ ಹೊಡೆತ ನೀಡಿದರೂ ವಟ್ಟಿಯೂರ್‌ಕಾವ್ ಮತ್ತು ಕೊನ್ನಿಯಲ್ಲಿ ಎಡಪಕ್ಷದ ಗೆಲುವು ದೊಡ್ಡ ಸಾಧನೆಯೇ ಆಗಿದೆ. ವಟ್ಟಿಯೂರ್‌ಕಾವ್‌ನಲ್ಲಿ ಎಲ್‌ಡಿಎಫ್ ಅಭ್ಯರ್ಥಿ ವಿ.ಕೆ. ಪ್ರಶಾಂತ್ 14,465 ಮತಗಳ ಅಂತರದಿಂದ ಹಾಗೂ ಕೊನ್ನಿಯಲ್ಲಿ ಕೆ.ಯು. ಜನೀಶ್ ಕುಮಾರ 9, 953 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಎರ್ನಾಕುಳಂನಲ್ಲಿ ಎಲ್‌ಡಿಎಫ್ ಮತ್ತು ಯುಡಿಎಫ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಮಂಜೇಶ್ವರದಲ್ಲಿ ಯುಡಿಎಫ್ ಗೆಲುವು ನಿರೀಕ್ಷಿತವಾಗಿತ್ತು.

ಯುಡಿಎಫ್ ಮತ್ತು ಎನ್‌ಡಿಎ ಈ ಬಾರಿ ಶಬರಿಮಲೆ ವಿಷಯವನ್ನೇ ಚುನಾವಣಾ ಅಸ್ತ್ರವನ್ನಾಗಿ ಮಾಡಿ ಪ್ರಚಾರ ಮಾಡಿದ್ದವು.

ವಟ್ಟಿಯೂರ್‌ಕಾವ್, ಕೊನ್ನಿ, ಎರ್ನಾಕುಳಂ ಮತ್ತು ಆರೂರ್ ಚುನಾವಣಾ ಕ್ಷೇತ್ರದ ಶಾಸಕರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದರಿಂದ ಇಲ್ಲಿ ಉಪಚುನಾವಣೆ ನಡೆದಿತ್ತು. ಅದೇ ವೇಳೆ ಮಂಜೇಶ್ವರದಲ್ಲಿ ಶಾಸಕ ಪಿ.ಬಿ ಅಬ್ದುಲ್ ರಜಾಕ್ ಅವರ ನಿಧನದಿಂದ ತೆರವಾಗಿದ್ದ ಸೀಟಿಗೆ ಈ ಬಾರಿ ಉಪಚುನಾವಣೆ ನಡೆದಿದೆ.

ಯುಡಿಎಫ್ ಭದ್ರಕೋಟೆಯಾಗಿದ್ದ ಕೊನ್ನಿ ಮತ್ತು ವಟ್ಟಿಯೂರ್‌ಕಾವ್‌ನಲ್ಲಿ ಎಲ್‌ಡಿಎಫ್ ವಿಜಯ ಪತಾಕೆ ಹಾರಿಸಿದ್ದು ಪಿಣರಾಯಿ ನೇತೃತ್ವದ ಎಲ್‌ಡಿಎಫ್ ಸರ್ಕಾರಕ್ಕೆ ಬಲ ತುಂಬಿದೆ.ಎರ್ನಾಕುಳಂ ಚುನಾವಣಾ ಕ್ಷೇತ್ರದಲ್ಲಿ ತೀವ್ರ ಪೈಪೋಟಿ ನೀಡಿದ್ದರೂ ಗೆಲುವು ಒಲಿದು ಬರಲಿಲ್ಲ.

ವಟ್ಟಿಯೂರ್‌ಕಾವ್‌ನಲ್ಲಿ ಭಾರೀಬಹುಮತದಿಂದ ಎಲ್‌ಡಿಎಫ್ ವಿಜಯ ಸಾಧಿಸಿದ್ದರೂ ಆರೂರ್‌ನಲ್ಲಿ ಪಕ್ಷದಮತಗಳು ಕಡಿಮೆಯಾಗಿವೆ. ಮಂಜೇಶ್ವರದಲ್ಲಿ ಎಲ್‌ಡಿಎಫ್ ಸಾಂಘಿಕ ಕಾರ್ಯಗಳನ್ನು ಕೈಗೊಳ್ಳುವಲ್ಲಿ ಎಡವಿತ್ತು. ಕಾಸರಗೋಡು ಪೆರಿಯಾದಲ್ಲಿ ನಡೆದ ಅವಳಿ ಕೊಲೆ ಪ್ರಕರಣವನ್ನು ಪ್ರಚಾರ ಅಸ್ತ್ರವಾಗಿರಿಸಿದ್ದ ಯುಡಿಎಫ್ ಈ ಬಾರಿ ಹೆಚ್ಚಿನ ಬಹುಮತಗಳಿಂದ ಗೆಲುವು ಸಾಧಿಸಿದೆ. ಶಬರಿಮಲೆ ವಿವಾದದಿಂದಾಗಿ ಜಾತಿ, ಧರ್ಮ, ನಂಬಿಕೆ ಆಧಾರದಲ್ಲಿ ಮತಗಳು ಹಂಚಿಕೆಯಾದರೂ ವಟ್ಟಿಯೂರ್‌ಕಾವ್ ಮತ್ತು ಕೊನ್ನಿಯ ಗೆಲುವು ಎಲ್‌ಡಿಎಫ್‌ಗೆ ಸಮಾಧಾನ ತಂದೊಡ್ಡಿದೆ. ಪಾಲಾ ಚುನಾವಣಾ ಕ್ಷೇತ್ರವನ್ನೂ ಇಲ್ಲಿ ಗಣನೆಗೆ ತೆಗೆದುಕೊಂಡರೆ ಎಲ್‌ಡಿಎಫ್ ಪಾಲಿಗೆ ಇದು ಆತ್ಮವಿಶ್ವಾಸ ತುಂಬಿದ ಗೆಲುವು ಆಗಿದೆ.

ಮೂರು ಸೀಟುಗಳನ್ನು ಗೆದ್ದುಕೊಂಡಿದ್ದರೂ ಯುಡಿಎಫ್‌ಗೆ ಮುಳುವಾಗಿದ್ದು ಪಕ್ಷದಲ್ಲಿನ ಭಿನ್ನಾಭಿಪ್ರಾಯ. ಕೊನ್ನಿಯಲ್ಲಿ ಸೀಟು ನಷ್ಟವಾಗಲು ಕಾರಣವೂ ಇದೆ. ಎರ್ನಾಕುಳಂನಲ್ಲಿ ಗೆಲುವು ಸಾಧಿಸಿದರೂ ಮತಗಳು ಕಡಿಮೆಯಾಗಿದೆ. ಇತ್ತ ಮಂಜೇಶ್ವರದಲ್ಲಿ ಮುಸ್ಲಿಂ ಲೀಗ್ ಸೀಟು ಉಳಿಸಿಕೊಂಡಿದ್ದು ಯುಡಿಎಫ್‌ಗೆ ಸಮಾಧಾನ ನೀಡಿದೆ.

ಎಲ್‌ಡಿಎಫ್- ಯುಡಿಎಫ್ ಪೈಪೋಟಿಯ ನಡುವೆ ಬಿಜೆಪಿಬಡವಾಗಿದ್ದರೂ, ಮಂಜೇಶ್ವರದಲ್ಲಿ ಮಾತ್ರ ಎರಡನೇ ಸ್ಥಾನ ಉಳಿಸಿಕೊಂಡಿದೆ. ಶಬರಿಮಲೆ ವಿಷಯವನ್ನೇ ಮುಂದಿಟ್ಟು ಬಿಜೆಪಿ ಚುನಾವಣೆ ಎದುರಿಸಿದ್ದರೂ ವಟ್ಟಿಯೂರ್‌ಕಾವ್‌ನಲ್ಲಿ ಬಿಜೆಪಿ ಮತಗಳು ತುಂಬಾ ಕಡಿಮೆಯಾಗಿದೆ.

ಫಲಿತಾಂಶ

ವಟ್ಟಿಯೂರ್ ಕಾವ್
ವಿ.ಕೆ ಪ್ರಶಾಂತ್ - 54, 830 (ಎಲ್‌ಡಿಎಫ್ )
ಕೆ. ಮೋಹನ್ ಕುಮಾರ್ - 40, 365 (ಯುಡಿಎಫ್)
ಎಸ್.ಸುರೇಶ್ - 27, 453 (ಎನ್‌ಡಿಎ)

ಕೊನ್ನಿ
ಕೆ.ಯು. ಜನೀಶ್ ಕುಮಾರ್ - 54099 (ಎಲ್‌ಡಿಎಫ್)
ಪಿ. ಮೋಹನ್ ರಾಜ್ - 44, 146 (ಯುಡಿಎಫ್
ಕೆ. ಸುರೇಂದ್ರನ್ - 39,786 ( ಎನ್‌ಡಿಎ)

ಆರೂರ್
ಶಾನಿಮೋಳ್ ಉಸ್ಮಾನ್ - 69,356 (ಯುಡಿಎಫ್)
ಮನು.ಸಿ.ಪುಳಿಯ್ಕಲ್ - 67,277(ಎಲ್‌ಡಿಎಫ್)
ಪ್ರಕಾಶ್ ಬಾಬು - 16, 289 (ಎನ್‌ಡಿಎ)

ಎರ್ನಾಕುಳಂ
ಟಿ.ಜೆ. ವಿನೋದ್- 37, 516 (ಯುಡಿಎಫ್)
ಮನು ರಾಯ್ - 34, 141(ಎಲ್‌ಡಿಎಫ್ )
ಸಿ.ಜಿ. ರಾಜಗೋಪಾಲ್- 13, 351 (ಎನ್‌ಡಿಎ)

ಮಂಜೇಶ್ವರ
ಎಂ.ಸಿ. ಖಮರುದ್ದೀನ್- 65, 407 (ಯುಡಿಎಫ್)
ರವೀಶ ತಂತ್ರಿ ಕುಂಟಾರು- 57, 484 (ಎನ್‌ಡಿಎ)
ಶಂಕರ ರೈ-38, 233 (ಎಲ್‌ಡಿಎಫ್)

ಇದನ್ನೂ ಓದಿ:ಹರಿಯಾಣ ವಿಧಾನಸಭೆ ಫಲಿತಾಂಶ; ಸಮೀಕ್ಷೆಗಳು ತಪ್ಪಾಗಿದ್ದು ಏಕೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.