ಕಾಸರಗೋಡು: ಕೇರಳ ಸರ್ಕಾರವು ‘ಲವ್ ಜಿಹಾದ್’ ತಡೆಯಲು ರಚನಾತ್ಮಕ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಭಾನುವಾರ ಟೀಕಿಸಿದ್ದಾರೆ. ಕೇರಳ ಹೈಕೋರ್ಟ್ 2009ರಲ್ಲೇ ‘ಲವ್ ಜಿಹಾದ್’ ವಿರುದ್ಧ ಹೇಳಿಕೆ ನೀಡಿದ್ದರೂ ಆ ಬಗ್ಗೆ ಸರ್ಕಾರ ಮಾತ್ರ ಇನ್ನೂ ಪರಿಶೀಲನೆ ನಡೆಸಿಲ್ಲ ಎಂದು ಅವರು ದೂರಿದ್ದಾರೆ.
ಕೇರಳ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ಕೆ.ಸುರೇಂದ್ರನ್ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿರುವ ‘ವಿಜಯ ಯಾತ್ರೆ’ ಉದ್ಘಾಟಿಸಿ ಅವರು ಮಾತನಾಡಿದ್ದಾರೆ.
‘ಲವ್ ಜಿಹಾದ್ ಕೇರಳವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಪರಿವರ್ತಿಸಲಿದೆ ಎಂದು 2009ರಲ್ಲಿ ಕೇರಳ ಹೈಕೋರ್ಟ್ ಕಳವಳ ವ್ಯಕ್ತಪಡಿಸಿತ್ತು. ಆದರೆ, ಕೇರಳ ಸರ್ಕಾರವು ನಿದ್ದೆ ಮಾಡುತ್ತಿದೆ. ನಮ್ಮ ಸರ್ಕಾರವು (ಉತ್ತರ ಪ್ರದೇಶ) ಲವ್ ಜಿಹಾದ್ ಮತ್ತು ಬಲವಂತದ ಮತಾಂತರ ತಡೆಗೆ ಕಾನೂನು ರೂಪಿಸಿದೆ’ ಎಂದು ಯೋಗಿ ಹೇಳಿದ್ದಾರೆ.
ಕೇರಳದಲ್ಲಿ ಕೋವಿಡ್–19 ಪ್ರಕರಣಗಳು ತೀವ್ರಗತಿಯಲ್ಲಿ ಏರಿಕೆಯಾಗುತ್ತಿರುವ ಬಗ್ಗೆಯೂ ಸರ್ಕಾರವನ್ನು ಯೋಗಿ ಟೀಕಿಸಿದ್ದಾರೆ.
14 ದಿನಗಳ ಕಾಲ ನಡೆಯಲಿರುವ ವಿಜಯ ಯಾತ್ರೆಯು ಕೇರಳದ ಎಲ್ಲ 14 ಜಿಲ್ಲೆಗಳನ್ನು ಹಾದುಹೋಗಲಿದೆ. ಯಾತ್ರೆಯ ಆರಂಭದೊಂದಿಗೆ ಕೇರಳದಲ್ಲಿ ಬಿಜೆಪಿಯ ಚುನಾವಣಾ ಪ್ರಚಾರವು ಅಧಿಕೃತವಾಗಿ ಶುರುವಾದಂತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.