ADVERTISEMENT

ಕೇರಳ ವಿಧಾನಸಭೆ ಅಧಿವೇಶನ: ರಾಜ್ಯಪಾಲರ ವಿರುದ್ಧ ವಿಪಕ್ಷಗಳ ಆಕ್ರೋಶ

‘ಸಂಘದ ಏಜೆಂಟ್‌, ವಾಪಸು ಹೋಗಿ‘

ಪಿಟಿಐ
Published 18 ಫೆಬ್ರುವರಿ 2022, 18:22 IST
Last Updated 18 ಫೆಬ್ರುವರಿ 2022, 18:22 IST
ಪಿಣರಾಯಿ ವಿಜಯನ್ 
ಪಿಣರಾಯಿ ವಿಜಯನ್    

ತಿರುವನಂತಪುರಂ:

ತಿರುವನಂತಪುರ: ಕೇರಳದಲ್ಲಿ ಬಿಜೆಪಿ ಪದಾಧಿಕಾರಿಯೊಬ್ಬರನ್ನು ರಾಜ್ಯಪಾಲರ ಆಪ್ತ ಸಹಾಯಕರನ್ನಾಗಿ ನೇಮಕ ಮಾಡಿರುವುದನ್ನು ಆಕ್ಷೇಪಿಸಿ ಪತ್ರ ಬರೆದಿದ್ದ ಐಎಎಸ್‌ ಅಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ. ಇದರ ಹಿಂದೆಯೇ ವಿಧಾನಮಂಡಲದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾಡಬೇಕಿದ್ದ ಭಾಷಣಕ್ಕೆ ರಾಜ್ಯಪಾಲ ಆರೀಫ್‌ ಮೊಹಮ್ಮದ್‌ ಖಾನ್‌ ಅವರು ಅಂಕಿತ ಹಾಕಿದ್ದಾರೆ.

ಬಿಜೆಪಿ ನಾಯಕರ ನೇಮಕವನ್ನು ಆಕ್ಷೇಪಿಸಿ ಸಾಮಾನ್ಯ ಆಡಳಿತ ವಿಭಾಗದ ಪ್ರಧಾನ ಕಾರ್ಯದರ್ಶಿ ಕೆ.ಆರ್.ಜ್ಯೋತಿಲಾಲ್‌ ಅವರು ರಾಜಭವನಕ್ಕೆ ಪತ್ರ ಬರೆದಿದ್ದರು. ಈ ಅಧಿಕಾರಿ ವಿರುದ್ಧ ಕ್ರಮ ಜರುಗಿಸಬೇಕು ಎಂದು ರಾಜ್ಯಪಾಲರು ಪಟ್ಟುಹಿಡಿದಿದ್ದಾರೆ ಎಂಬ ವರದಿಗಳಿದ್ದವು.

ADVERTISEMENT

ಈ ಬೆಳವಣಿಗೆ ಕುರಿತಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರೂ ರಾಜ್ಯಪಾಲರ ಜೊತೆಗೆ ಚರ್ಚಿಸಿದ್ದರು. ಇದರ ಬೆನ್ನಲ್ಲೇ ಜ್ಯೋತಿಲಾಲ್‌ ಅವರನ್ನು ಹುದ್ದೆಯಿಂದ ತೆರವುಗೊಳಿಸಲಾಗಿದೆ. ಇದಾದ ಬಳಿಕವೇ ಜಂಟಿ ಅಧಿವೇಶನ ಉದ್ದೇಶಿಸಿ ತಾವು ಮಾಡಬೇಕಿದ್ದ ಭಾಷಣಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ.

ಬಿಜೆಪಿ ರಾಜ್ಯ ಘಟಕದ ಪದಾಧಿಕಾರಿಯಾಗಿದ್ದ ಹರಿ ಎಸ್.ಕರ್ತಾ ಅವರನ್ನು ರಾಜ್ಯಪಾಲರ ಆಪ್ತ ಸಹಾಯಕನಾಗಿ ನೇಮಿಸಲಾಗಿತ್ತು. ಇದಕ್ಕೆ ಆಕ್ಷೇಪಿಸಿ ಐಎಎಸ್‌ ಅಧಿಕಾರಿ ಪತ್ರ ಬರೆದಿದ್ದರು. ರಾಜಕೀಯ ಹಿನ್ನೆಲೆಯವರನ್ನು ರಾಜಭವನದಲ್ಲಿ ಸಿಬ್ಬಂದಿಯಾಗಿ ನೇಮಿಸಿರುವ ನಿದರ್ಶನ ಇಲ್ಲ ಎಂದಿದ್ದರು.

ಇದಕ್ಕೆ ಕಟುವಾಗಿ ಪ್ರತಿಕ್ರಿಯಿಸಿದ್ದ ರಾಜ್ಯಪಾಲರು, ‘ಮಂತ್ರಿಗಳು ರಾಜಕೀಯ ಹಿನ್ನೆಲೆಯವರನ್ನೇ ಆಪ್ತ ಸಿಬ್ಬಂದಿಯಾಗಿ ನೇಮಕ ಮಾಡಿಕೊಳ್ಳಲಿದ್ದು, ಅವರಿಗೆ ಜೀವನಪೂರ್ತಿ ಪಿಂಚಣಿ ನೀಡುವುದಿಲ್ಲವೇ’ ಎಂದು ಪ್ರಶ್ನಿಸಿದ್ದರು.

ಈ ನಡುವೆ, ವಿರೋಧಪಕ್ಷದ ನಾಯಕ ವಿ.ಡಿ.ಸತೀಶನ್‌ ಅವರು, ರಾಜ್ಯಪಾಲರು ಮತ್ತು ಸರ್ಕಾರದ ನಡುವೆ ಇರುವ ಆತ್ಮೀಯ ಒಡನಾಟವನ್ನು ಮುಚ್ಚಿಡಲು ಇದೊಂದು ಗಿಮಿಕ್‌ ಅಷ್ಟೇ ಎಂದು ವ್ಯಂಗ್ಯವಾಡಿದ್ದರು. ವಿಶ್ವವಿದ್ಯಾಲಯಗಳಿಗೆ ನೇಮಕ ಕುರಿತಂತೆ ರಾಜ್ಯಪಾಲರು ಸರ್ಕಾರದ ರಾಜಕೀಯ ಒತ್ತಡಕ್ಕೆ ಮಣಿದಿದ್ದಾರೆ. ಇದಕ್ಕೆ ಪ್ರತಿಯಾಗಿ ರಾಜಕೀಯ ಹಿನ್ನೆಲೆಯವರನ್ನು ರಾಜಭವನಕ್ಕೆ ನೇಮಿಸಲಾಗಿದೆ ಎಂದುಹೇಳಿದ್ದಾರೆ.

‘ಸಂಘದ ಏಜೆಂಟ್‌, ವಾಪಸು ಹೋಗಿ’

ನಿರೀಕ್ಷೆಯಂತೆಯೇ ಕೇರಳ ವಿಧಾನಸಭೆ ಅಧಿವೇಶನದ ಮೊದಲ ದಿನ ಗೊಂದಲದ ಸ್ಥಿತಿ ಮೂಡಿದ್ದು, ರಾಜ್ಯಪಾಲರದ ಭಾಷಣದ ವೇಳೆ ಪ್ರತಿಪಕ್ಷಗಳ ಸದಸ್ಯರು ಘೋಷಣೆಗಳನ್ನು ಕೂಗಿದರು.

‘ವಾಪಸು ಹೋಗಿ’ ಎಂದು ಘೋಷಣೆ ಕೂಗಿದ ವಿರೋಧಪಕ್ಷಗಳ ಸದಸ್ಯರು, ರಾಜ್ಯಪಾಲರ ಭಾಷಣವನ್ನು ಬಹಿಷ್ಕರಿಸಿ, ಬಳಿಕ ಸದನದ ಹೊರಗಡೆ ಧರಣಿ ನಡೆಸಿದರು. ರಾಜ್ಯಪಾಲರು ಸದನ ಪ್ರವೇಶಿಸುತ್ತಿದ್ದಂತೆಯೇ ಧಿಕ್ಕಾರದ ಘೋಷಣೆ ಕೂಗಿ, ಭಿತ್ತಿಪತ್ರ ಪ್ರದರ್ಶಿಸಿದರು.

ರಾಜ್ಯದಲ್ಲಿ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಅನಪೇಕ್ಷಿತ ಒಪ್ಪಂದವಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರನ್ನು ರಕ್ಷಿಸುವ ಉದ್ದೇಶದಿಂದಲೇ ರಾಜ್ಯಪಾಲರು ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ತರುವ ಸುಗ್ರೀವಾಜ್ಞೆಗೆ ಸಹಿ ಹಾಕಿದ್ದಾರೆ ಎಂದು ಟೀಕಿಸಿದರು.

ಬಳಿಕ ಸುದ್ದಿಗಾರರ ಜೊತೆಗೆ ಮಾತನಾಡಿದ ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್ ಅವರು, ರಾಜ್ಯಪಾಲರು ಸಂಘ ಪರಿವಾರದ ಏಜೆಂಟರಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದರು.

ಕಲಾಪದ ವೇಳೆ ಸತೀಶನ್‌ ಮಾತನಾಡಲು ಯತ್ನಿಸಿದಾಗ ಇರಿಸುಮುರಿಸುಗೊಂಡಂತಿದ್ದ ರಾಜ್ಯಪಾಲರು, ಇದು, ಪ್ರತಿಭಟನೆಯ ಸಂದರ್ಭವಲ್ಲ. ಪ್ರತಿಪಕ್ಷ ನಾಯಕನ ಸ್ಥಾನ ಜವಾಬ್ದಾರಿಯುಳ್ಳದ್ದಾಗಿದೆ ಎಂದು ಹೇಳಿದರು.

ತಮ್ಮ ಭಾಷಣದಲ್ಲಿ ರಾಜ್ಯಪಾಲ ಆರೀಫ್‌ ಮೊಹಮ್ಮದ್‌ ಖಾನ್‌ ಅವರು, ರಾಜ್ಯ ಸರ್ಕಾರದ ಸಾಧನೆಗಳನ್ನು ಪಟ್ಟಿ ಮಾಡಿದರು. ಕೇಂದ್ರವು ರಾಜ್ಯಗಳಿಗೆ ಸಂಪನ್ಮೂಲ ಹಂಚಿಕೆಯನ್ನು ಕಡಿಮೆ ಮಾಡಿದ್ದು, ಆರ್ಥಿಕ ದುಸ್ಥಿತಿಗೆ ತಳ್ಳುತ್ತಿದೆ ಎಂದು ಟೀಕಿಸಿದರು.

ಒಕ್ಕೂಟ ವ್ಯವಸ್ಥೆಯಲ್ಲಿ ಸಹಕಾರದ ಮಹತ್ವವನ್ನು ಒತ್ತಿ ಹೇಳಿದ ಅವರು, ಇತ್ತೀಚಿನ ದಿನಗಳಲ್ಲಿ ಕೇಂದ್ರ ರೂಪಿಸಿದ ಶಾಸನಗಳು ರಾಜ್ಯಗಳು ಚರ್ಚೆಯಾಗುತ್ತವೆ. ಶಾಸನ ರೂಪಿಸುವ ಮೊದಲು ರಾಜ್ಯಗಳ ಜೊತೆಗೆ ಪರಿಣಾಮಕಾರಿ ಚರ್ಚೆಯೂ ಆಗುತ್ತಿಲ್ಲ ಎಂದರು.

ಇದು, ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದುದು. ನಮ್ಮ ಸರ್ಕಾರ ಇದರ ವಿರುದ್ಧವಾಗಿದ್ದು, ಇಂಥ ವ್ಯವಸ್ಥೆ ಮುಂದುವರಿಯಬಾರದು ಎಂಬುದಾಗಿ ಬಯಸುತ್ತದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.