ADVERTISEMENT

ಸಿಎಎ ರದ್ದತಿಗೆ ನಿರ್ಣಯ: ಕೇರಳ ವಿಧಾನಸಭೆಯಲ್ಲಿ ಮೂಡಿದ ಒಮ್ಮತ

ಪಿಟಿಐ
Published 31 ಡಿಸೆಂಬರ್ 2019, 19:45 IST
Last Updated 31 ಡಿಸೆಂಬರ್ 2019, 19:45 IST
ಪಿಣರಾಯಿ ವಿಜಯನ್
ಪಿಣರಾಯಿ ವಿಜಯನ್   

ತಿರುವನಂತಪುರ: ಪೌರತ್ವ (ತಿದ್ದುಪಡಿ) ಕಾಯ್ದೆ ರದ್ದುಪಡಿಸಬೇಕೆಂದು ಆಗ್ರಹಿಸಿ ಕೇರಳ ವಿಧಾನಸಭೆಯಲ್ಲಿ ಮಂಗಳವಾರ ಒಮ್ಮತದ ನಿರ್ಣಯ ಅಂಗೀಕರಿಸಲಾಯಿತು. ಈ ಮೂಲಕ ಶಾಸಕಾಂಗ ಮಾರ್ಗ ಬಳಸಿ ಕಾಯ್ದೆಗೆ ವಿರೋಧ ವ್ಯಕ್ತಪಡಿಸಿದ ದೇಶದ ಮೊದಲ ರಾಜ್ಯ ಎನಿಸಿಕೊಂಡಿದೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಸೇರಿದಂತೆ ಬಿಜೆಪಿಯೇತರ ರಾಜ್ಯಗಳ ಮುಖ್ಯಮಂತ್ರಿಗಳು ಸಿಎಎ ಜಾರಿಗೆ ಈಗಾಗಲೇ ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ.

ಸಿಪಿಎಂ ನೇತೃತ್ವದ ಎಲ್‌ಡಿಎಫ್‌ ಹಾಗೂ ವಿರೋಧ ಪಕ್ಷವಾದ ಕಾಂಗ್ರೆಸ್ ನೇತೃತ್ವದ ಯುಡಿಎಫ್ ತಮ್ಮ ನಡುವಿನ ರಾಜಕೀಯ ಭಿನ್ನಾಭಿಪ್ರಾಯ ಬದಿಗಿರಿಸಿ ಈ ವಿಷಯದಲ್ಲಿ ಕೇಂದ್ರದ ವಿರುದ್ಧ ಒಂದಾಗಿದ್ದಾರೆ. 140 ಸದಸ್ಯಬಲದ ವಿಧಾನಸಭೆಯಲ್ಲಿ ಬಿಜೆಪಿಯ ಏಕೈಕ ಶಾಸಕ ಓ.ರಾಜಗೋಪಾಲ್ ಮಾತ್ರ ಈ ನಿರ್ಣಯಕ್ಕೆ ವಿರೋಧ ವ್ಯಕ್ತಪಡಿಸಿದರು.

ADVERTISEMENT

‘ಈ ನಿರ್ಣಯ ಅಸಾಂವಿಧಾನಿಕವಾದುದು. ರಾಜಕೀಯ ಲಾಭಕ್ಕಾಗಿ ಕಾಯ್ದೆ ಕುರಿತು ಸುಳ್ಳುಗಳನ್ನು ಹಬ್ಬಿಸಲಾಗುತ್ತಿದೆ’ ಎಂದು ಆರೋಪಿಸಿದರು.

ಎನ್‌ಪಿಆರ್‌ ಚಟುವಟಿಕೆಗೆ ನಿಷೇಧ: ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ಮೂಲಕ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್‌ಸಿ) ಪ್ರಕ್ರಿಯೆ ನಡೆಸಬಹುದು ಎನ್ನುವುದು ರಾಜ್ಯದ ಜನರ ಭೀತಿಯಾಗಿದೆ. ಆದ್ದರಿಂದ ಎನ್‌ಪಿಆರ್‌ಗೆ ಸಂಬಂಧಿಸಿ ಎಲ್ಲಾ ಚಟುವಟಿಕೆಗಳಿಗೆ ರಾಜ್ಯದಲ್ಲಿ ಈಗಾಗಲೇ ನಿಷೇಧ ಹೇರಲಾಗಿದೆ.

‘100 ಸಂಘಟನೆಗಳಿಂದ ಒಗ್ಗಟ್ಟಿನ ಹೋರಾಟ’
(ನವದೆಹಲಿ): ‘ಪೌರತ್ವ (ತಿದ್ದುಪಡಿ) ಕಾಯ್ದೆ, ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಸುಮಾರು 100 ಸಂಘಟನೆಗಳು ‘ವಿ ದ ಪೀಪಲ್ ಆಫ್ ಇಂಡಿಯಾ’ ಹೆಸರಿನ ಅಡಿಯಲ್ಲಿ ಒಗ್ಗಟ್ಟಾಗಲಿವೆ’ ಎಂದು ಸ್ವರಾಜ್‌ ಅಭಿಯಾನ ಪಕ್ಷದ ಸ್ಥಾಪಕ ಯೋಗೇಂದ್ರ ಯಾದವ್ ತಿಳಿಸಿದ್ದಾರೆ.

‘ಜನವರಿಯಲ್ಲಿ ದೇಶವ್ಯಾಪಿ ಸರಣಿ ಪ್ರತಿಭಟನೆಗಳು ನಡೆಯಲಿವೆ. ಪ್ರಮುಖ ವ್ಯಕ್ತಿಗಳು ಹುಟ್ಟಿದ ಅಥವಾ ಮೃತಪಟ್ಟ ದಿನದಂದು ಇವುಗಳನ್ನು ಆಯೋಜಿಸಲಾಗುತ್ತದೆ. ಜ.3 ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನವಾಗಿದ್ದು, ಅಂದು ಸರಣಿ ಪ್ರತಿಭಟನೆಗಳಿಗೆ ಚಾಲನೆ ದೊರಕಲಿದೆ’ ಎಂದು ಹೇಳಿದ್ದಾರೆ.

‘ಸಂಸತ್ತಿಗೆ ಮಾತ್ರ ಅಧಿಕಾರ’
‘ಪೌರತ್ವ (ತಿದ್ದುಪಡಿ) ಕಾಯ್ದೆಗೆ (ಸಿಎಎ) ಸಂಬಂಧಿಸಿ ಯಾವುದೇ ಕಾನೂನು ಜಾರಿಗೆ ತರಲು ಸಂಸತ್ತಿಗೆ ಮಾತ್ರ ಅಧಿಕಾರ ಇದೆ. ಕೇರಳ ಸೇರಿದಂತೆ ಯಾವುದೇ ವಿಧಾನಸಭೆಗೂ ಈ ಅಧಿಕಾರವಿಲ್ಲ’ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.

ಕೇರಳ ವಿಧಾನಸಭೆಯಲ್ಲಿ ಸಿಎಎ ವಿರೋಧಿಸಿ ನಿರ್ಣಯ ಅಂಗೀಕಾರವಾದ ಕೆಲವೇ ತಾಸುಗಳಲ್ಲಿ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

ಪೌರತ್ವ: ಆನ್‌ಲೈನ್ ಪ್ರಕ್ರಿಯೆಗೆ ಚಿಂತನೆ
ಪೌರತ್ವ (ತಿದ್ದುಪಡಿ) ಕಾಯ್ದೆ ಅಡಿಯಲ್ಲಿ ಪೌರತ್ವ ನೀಡುವ ಪ್ರಕ್ರಿಯೆಯನ್ನು ಅಂತರ್ಜಾಲದ ಮೂಲಕ ನಡೆಸಲು ಕೇಂದ್ರ ಸರ್ಕಾರ ಮುಂದಾಗುವ ಸಂಭವ ಇದೆ. ಪ್ರಸ್ತುತ, ಪೌರತ್ವ‌ ಪಡೆಯಲು ಜಿಲ್ಲಾ ಮ್ಯಾಜಿಸ್ಟ್ರೇಟ್ ಮೂಲಕ ಅರ್ಜಿ ರವಾನಿಸುವ ಪದ್ಧತಿ ಅನುಸರಿಸಲಾಗುತ್ತಿದೆ. ಇನ್ನುಮುಂದೆ ಇದರ ಬದಲಿಗೆ, ಹೊಸ ಅಧಿಕಾರಿಯನ್ನು ನೇಮಿಸಲು ಗೃಹವ್ಯವಹಾರಗಳ ಸಚಿವಾಲಯ ಚಿಂತನೆ ನಡೆಸುತ್ತಿದೆ.

ಸಂಸದರಿಗೆ ಬಿಳಿ ಗುಲಾಬಿ
ಮೈಸೂರು:
ಹೊಸ ವರ್ಷದ ದಿನದಂದು (ಜ.1) ರಾಜ್ಯದ ಎಲ್ಲ ಸಂಸದರ ನಿವಾಸಕ್ಕೆ ತೆರಳಿ ಬಿಳಿ ಗುಲಾಬಿ ನೀಡಿ, ಪೌರತ್ವ (ತಿದ್ದುಪಡಿ) ಕಾಯ್ದೆಯ ವಿರುದ್ಧ ಧ್ವನಿ ಎತ್ತುವಂತೆ ಮನವಿ ಮಾಡಲಾಗುವುದು ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ಹೇಳಿದರು.

ಮಹಿಳೆಯರ ಮೇಲಿನ ದೌರ್ಜನ್ಯಗಳಿಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳುವಂತೆ ಇದೇ ವೇಳೆ ಸಂಸದರನ್ನು ಆಗ್ರಹಿಸಲಾಗುವುದು ಎಂದು ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪೌರತ್ವ ಕಾಯ್ದೆ ಹಾಗೂ ಮಹಿಳಾ ದೌರ್ಜನ್ಯದ ವಿರುದ್ಧ ಮೈಸೂರಿನಲ್ಲಿ ಜ.2 ರಂದು ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಇದೇ ರೀತಿಯ ಸ್ಪರ್ಧೆಯನ್ನು ರಾಜ್ಯದಾದ್ಯಂತ ನಡೆಸಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.