ವಯನಾಡು: ಕೇರಳ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಬುಡಕಟ್ಟು ಮುಖಂಡ ಮತ್ತು ಜನಾಧಿಪತ್ಯ ಪಕ್ಷದ (ಜೆಆರ್‌ಪಿ) ಅಧ್ಯಕ್ಷ ಸಿ. ಕೆ. ಜಾನು ಎಂಬುವವರಿಗೆ ಲಂಚ ನೀಡಿದ ಆರೋಪದ ಮೇಲೆ ಕೇರಳ ಬಿಜೆಪಿ ಮುಖ್ಯಸ್ಥ ಕೆ.ಸುರೇಂದ್ರನ್ ವಿರುದ್ಧ ಗುರುವಾರ ಪ್ರಕರಣ ದಾಖಲಾಗಿದೆ.
ಲಂಚದ ಆರೋಪದ ಹಿನ್ನೆಲೆಯಲ್ಲಿ ಸುರೇಂದ್ರನ್ ವಿರುದ್ಧ ಪ್ರಕರಣ ದಾಖಲಿಸುವಂತೆ ಕೋರ್ಟ್ ಪೊಲೀಸರಿಗೆ ಬುಧವಾರ ನಿರ್ದೇಶನ ನೀಡಿತ್ತು. ಅದರಂತೆ ಮರುದಿನವೇ ಪ್ರಕರಣ ದಾಖಲಾಗಿದೆ.
171 ಇ (ಲಂಚ) ಮತ್ತು 171 ಎಫ್ (ಚುನಾವಣೆಯಲ್ಲಿ ವ್ಯಕ್ತಿ ಮೇಲೆ ಪ್ರಭಾವ ಬೀರುವುದು) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜಾನು ಅವರಿಗೆ ಹಣ ಪಾವತಿಸುವ ಕುರಿತ ಸುರೇಂದ್ರನ್ ಮತ್ತು ಜೆಆರ್‌ಪಿ ನಾಯಕಿ ಪ್ರಸೀತಾ ಅಝಿಕೋಡ್ ಅವರ ನಡುವಿನ ಸಂಭಾಷಣೆಯ ಆಡಿಯೋ ತುಣುಕುಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು.
ಸುರೇಂದ್ರನ್ ಮತ್ತು ಬಿಜೆಪಿಯು ಆರೋಪಗಳನ್ನು ನಿರಾಕರಿಸಿದೆ. ಆದರೆ, ಆರಂಭಿಕ ಮಾಹಿತಿಗಳ ಆಧಾರದಲ್ಲಿ ನ್ಯಾಯಾಲಯವು ಆಡಿಯೊ ತುಣುಕುಗಳ ನೈಜತೆಯನ್ನು ಅಂಗೀಕರಿಸಿದೆ.
ಇದಕ್ಕೂ ಹಿಂದೆ ಜೂನ್ 7 ರಂದು ಸುರೇಂದ್ರನ್ ಅವರ ವಿರುದ್ಧ ಇಂಥದ್ದೇ ಆರೋಪ ಕೇಳಿಬಂದಿತ್ತು. ಮಂಜೇಶ್ವರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸುಂದರ ಎಂಬುವವರ ಉಮೇದುವಾರಿಕೆ ಹಿಂತೆಗೆಸಲು ಬೆದರಿಕೆ, ಆಮಿಷ ಒಡ್ಡಿದ ಆರೋಪ ಅವರ ವಿರುದ್ಧ ಕೇಳಿ ಬಂದಿತ್ತು. ಈ ಸಂಬಂಧ ಪ್ರಕರಣವನ್ನೂ ದಾಖಲಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.