ಕೊಚ್ಚಿ: ಹಿಂಸೆಯ ಸಂಸ್ಕೃತಿಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಕಳಮಶ್ಶೇರಿ ಬಾಂಬ್ ಬ್ಲಾಸ್ಟ್ ಪ್ರಕರಣದ ಸಂಬಂಧ ಕೇರಳ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಪ್ರತಿಕ್ರಿಯಿಸಿದ್ದಾರೆ.
ದುರಂತದಲ್ಲಿ ಗಾಯಗೊಂಡು ಕಳಮಶ್ಶೇರಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಭೇಟಿಯಾದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಪ್ರಕರಣವನ್ನು ರಾಜ್ಯ ಸರ್ಕಾರ ಸರಿಯಾಗಿ ನಿಭಾಯಿಸುತ್ತಿದೆಯೇ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಈ ಪ್ರಶ್ನೆಗೆ ಉತ್ತರಿಸಲು ಇದು ಸರಿಯಾದ ಸಮಯವಲ್ಲ. ಏನಾದರೂ ಲೋಪಗಳಾದಲ್ಲಿ ಭವಿಷ್ಯದಲ್ಲಿ ಈ ಪ್ರಶ್ನೆಯನ್ನು ನೀವು ಕೇಳಬಹು’ ಎಂದರು.
‘ಈಗ ಎರಡು ಸಂಗತಿಗಳಿವೆ. ಒಂದು ಸಹಾನುಭೂತಿ ವ್ಯಕ್ತಪಡಿಸುವುದು. ಎರಡನೆಯದು ಹಿಂಸೆಯ ಸಂಸ್ಕೃತಿಯನ್ನು ನಾವು ಸಹಿಸಿಕೊಳ್ಳಬಾರದು. ಇದು ಪ್ರಜಾಪ್ರಭುತ್ವಕ್ಕೆ ಅಸಹ್ಯ. ಕಾನೂನಿಗೆ ಮತ್ತು ನಾಗರಿಕ ಸಮಾಜಕ್ಕೂ ಇದು ಅಸಹ್ಯ. ಕಾನೂನು ಕೈಗೆತ್ತಿಕೊಂಡು ಜನರ ಜೀವದ ಜತೆ ಆಟವಾಡಲು ಬಿಡಬಾರದು’ ಎಂದು ಅವರು ಹೇಳಿದರು.
ಈ ಕೃತ್ಯಕ್ಕೆ ನಾವು ಯಾರನ್ನೂ ದೂಷಿಸಲಾಗದು. ಪರಸ್ಪರರನ್ನು ಗೌರವಿಸುವ ಬಗ್ಗೆ ನಾವು ಜಾಗೃತಿ ಮೂಡಿಸಬಹುದು. ಈ ರೀತಿಯ ಕೊಳಕು ಘಟನೆ ಮತ್ತೆಂದೂ ಸಂಭವಿಸುವುದಿಲ್ಲ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.