ADVERTISEMENT

ಕೇಂದ್ರದಿಂದ ದಕ್ಷಿಣ ರಾಜ್ಯಗಳ ನಿರ್ಲಕ್ಷ್ಯ ಆರೋಪ: ದೆಹಲಿಯಲ್ಲಿ ಕೇರಳ CM ಧರಣಿ

ಪಿಟಿಐ
Published 16 ಜನವರಿ 2024, 11:38 IST
Last Updated 16 ಜನವರಿ 2024, 11:38 IST
<div class="paragraphs"><p>ಪಿಣರಾಯಿ ವಿಜಯನ್</p></div>

ಪಿಣರಾಯಿ ವಿಜಯನ್

   

ತಿರುವನಂತಪುರ: ‘ದಕ್ಷಿಣ ರಾಜ್ಯಗಳನ್ನು ಕೇಂದ್ರ ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಸಂಪುಟದ ಇತರ ಸಚಿವರು ಫೆ. 8ರಂದು ದೆಹಲಿಯಲ್ಲಿ ಪ್ರತಿಭಟನೆ ನಡೆಸಲು ಉದ್ದೇಶಿಸಿದ್ದಾರೆ‘ ಎಂದು ಎಲ್‌ಡಿಎಫ್‌ ನೇತೃತ್ವದ ಕೇರಳ ರಾಜ್ಯ ಸರ್ಕಾರ ಮಂಗಳವಾರ ತಿಳಿಸಿದೆ.

ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ವಿರೋಧ ಪಕ್ಷವಾದ ಕಾಂಗ್ರೆಸ್–ಯುಡಿಎಫ್‌ಗೂ ಆಹ್ವಾನ ನೀಡಲಾಗಿದೆ ಎಂದು ಎಲ್‌ಡಿಎಫ್‌ ಸಂಚಾಲಕ ಇ.ಪಿ.ಜಯರಾಜನ್ ಹೇಳಿದ್ದಾರೆ.

ADVERTISEMENT

‘ಕೇಂದ್ರದ ಮಲತಾಯಿ ಧೋರಣೆ ವಿರುದ್ಧ ಹಾಗೂ ದೆಹಲಿಯಲ್ಲಿ ನಡೆಯುವ ಪ್ರತಿಭಟನೆ ಕುರಿತು ರಾಜ್ಯದ ಮನೆ ಮನೆಗಳಿಗೆ ಭೇಟಿ ಜನರಿಗೆ ಮಾಹಿತಿ ನೀಡಲಾಗುವುದು’ ಎಂದಿದ್ದಾರೆ‌.

ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಹಾಗೂ ಉಪ ನಾಯಕ ಪಿ.ಕೆ.ಕುನ್ಹಲಿಕುಟ್ಟಿ ಅವರೊಂದಿಗೆ ಆನ್‌ಲೈನ್ ಮೂಲಕ ಸಮಾಲೋಚನೆ ನಡೆಸಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ಕುರಿತು ಮಾತುಕತೆ ನಡೆಸಿದ್ದಾರೆ.

ಧರಣಿಯಲ್ಲಿ ಪಾಲ್ಗೊಳ್ಳಬೇಕೇ ಅಥವಾ ಬೇಡವೇ ಎಂಬುದನ್ನು ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಮುಖ್ಯಮಂತ್ರಿಗೆ ಸತೀಶನ್ ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.

‘ರಾಜ್ಯದ ಎಲ್ಲಾ ಆರ್ಥಿಕ ಸಮಸ್ಯೆಗಳಿಗೂ ಕೇಂದ್ರವನ್ನು ದೂಷಿಸುವುದನ್ನು ವಿರೋಧ ಪಕ್ಷಗಳು ಒಪ್ಪುವುದಿಲ್ಲ. ತೆರಿಗೆ ಸಂಗ್ರಹ, ಚಿನ್ನದ ಮಾರಾಟ ಹಾಗೂ ಐಜಿಎಸ್‌ಟಿಯಲ್ಲಿ ರಾಜ್ಯದ ಪಾಲನ್ನು ಪಡೆಯುವಲ್ಲಿ ರಾಜ್ಯ ಸರ್ಕಾರದ ತಪ್ಪು ನಿರ್ವಹಣೆಯ ಪಾಲೂ ಇದೆ’ ಎಂದೂ ಸತೀಶನ್ ಸ್ಪಷ್ಟಪಡಿಸಿದ್ದಾರೆ.

‘ಕೇಂದ್ರಕ್ಕೆ ನಿರಂತರವಾಗಿ ಪತ್ರ ಬರೆಯುತ್ತಲೇ ಇದ್ದರೂ ರಾಜ್ಯ ಸರ್ಕಾರದ ವಿರುದ್ಧದ ತಾತ್ಸಾರ ಮನೋಭಾವ ಕೊನೆಗೊಂಡಿಲ್ಲ. ಕೇಂದ್ರ ಸರ್ಕಾರವು ರಾಜ್ಯ ಕುರಿತು ತನ್ನ ನಿರ್ಲಕ್ಷ್ಯ ಧೋರಣೆ ಮುಂದುವರಿಸಿದೆ. ಇದು ಕೇರಳ ಸರ್ಕಾರದ ಉಳಿವಿನ ಪ್ರಶ್ನೆಯಾಗಿದೆ’ ಎಂದು ರಾಜ್ಯ ಸರ್ಕಾರ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.