ಕೊಚ್ಚಿ: ಅಮಿತ್ ಶಾ ಹಲವೆಡೆ ಹಲವು ರೀತಿಯಲ್ಲಿ ಕಾರ್ಯತಂತ್ರ ಮಾಡಿದ್ದಾರೆ ಎಂದು ಕೇಳಿದ್ದೇನೆ.ಆದರೆ ಇಲ್ಲಿ ಅವರ ಕಾರ್ಯ ತಂತ್ರನಡೆಯುವುದಿಲ್ಲ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಅವರ ನಿಲುವುಗಳನ್ನು ಈ ರಾಜ್ಯದಲ್ಲಿ ಅನುಷ್ಠಾನಗೊಳಿಸಲು ಮುಂದಾದರೆ ಶ್ರೀ ನಾರಾಯಣ ಗುರು, ಚಟ್ಟಂಬಿ ಸ್ವಾಮಿ, ಅಯ್ಯಂಕಾಳಿಯವರ ಅನುಯಾಯಿಗಳಾಗಿರುವ ಇಲ್ಲಿನ ಜನರು ಅದಕ್ಕೆ ಬೆಂಬಲ ನೀಡುವುದಿಲ್ಲ.ಆದ್ದರಿಂದಲೇ ಎಸ್‍ಎನ್‌ಡಿಪಿ ಜತೆ ಸೇರಿ ನಾವು ಮುಷ್ಕರ ಮಾಡುತ್ತೇವೆ ಎಂದು ಅಮಿತ್ ಶಾ ಹೇಳಿದಮರುದಿನ, ನಮ್ಮನ್ನು ನೋಡಿ ನೀವು ಮುಷ್ಕರಕ್ಕೆ ಧುಮುಕುವ ಅಗತ್ಯವಿಲ್ಲ ಎಂದು ಎಸ್‍ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಉತ್ತರಿಸಿದ್ದು ಎಂದಿದ್ದಾರೆ ಪಿಣರಾಯಿ.
ಎಲ್‍ಡಿಎಫ್ ನೇತೃತ್ವದಲ್ಲಿ ಕೊಚ್ಚಿ ಜವಾಹರ್ ಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದ ಎಲ್‍ಡಿಎಫ್ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪಿಣರಾಯಿ, ಒಂದಷ್ಟು ಜನರು ಈ ಸರ್ಕಾರವನ್ನು ಇಲ್ಲಿ ತಂದು ಕೂರಿಸಿದ್ದಲ್ಲ. ಇಲ್ಲಿರುವ ಜನರು ನಮ್ಮನ್ನು ಮತದಾನದ ಮೂಲಕ ಆಯ್ಕೆಮಾಡಿದ್ದು.ನಿಮಗೆ ಇಲ್ಲಿ ಒಂದು ಸೀಟು ಸಿಕ್ಕಿದ್ದು ನಿಮ್ಮ ಸಾಮರ್ಥ್ಯದಿಂದ ಅಲ್ಲ ಎಂಬ ವಿಷಯ ನಿಮಗೂ, ನಮಗೂ ಎಲ್ಲರಿಗೂ ಗೊತ್ತಿದೆ.ಅದಕ್ಕೆ ಕಾರಣ ಕಾಂಗ್ರೆಸ್.ಕಾಂಗ್ರೆಸ್ ಪಕ್ಷದಲ್ಲಿರುವ ಕೆಲವು ವ್ಯಕ್ತಿಗಳ ದೇಹ ಮಾತ್ರ ಆ ಪಕ್ಷದಲ್ಲಿದೆ.ಅವರು ಬೇರೆಯೆಡೆ ಹೋಗಲು ಸನ್ನದ್ಧರಾದವರಾದವರು. ಅವಕಾಶ ಸಿಕ್ಕಿದಾಗಲೆಲ್ಲಾ ಚೆನ್ನಿತ್ತಲ ಬಿಜೆಪಿಗೆ ಬೆಂಬಲ ಸೂಚಿಸುತ್ತಾರೆ. ಸ್ವಯಂ ನಾಶದ ದಾರಿಯಲ್ಲಿ ಅವರು ಸಾಗುತ್ತಿದ್ದಾರೆ ಎಂಬುದನ್ನು ಕಾಂಗ್ರೆಸ್ ಅರ್ಥ ಮಾಡಿಕೊಳ್ಳಬೇಕು.ದೇಶದ ಹಲವಾರು ಕಡೆ ಇದನ್ನು ನೋಡಿದ್ದೇನೆ.
ಶಬರಿಮಲೆ ಭಕ್ತರು ಆತಂಕಕ್ಕೀಡಾಗುವ ಅಗತ್ಯವಿಲ್ಲ.ಎಲ್ಲ ರೀತಿಯ ರಕ್ಷಣೆಯನ್ನು, ಸೌಕರ್ಯಗಳನ್ನು ಸರ್ಕಾರ ನೀಡುತ್ತದೆ. ನಾವು ವಿಶ್ವಾಸಿಗಳೋ ಅಲ್ಲವೋಎಂಬುದು ಇಲ್ಲಿ ಅಗತ್ಯಲಿಲ್ಲ. ಎಡಪಕ್ಷ ಸರ್ಕಾರ ಇಲ್ಲಿ ಅಧಿಕಾರಕ್ಕೆ ಬಂದ ನಂತರ ಶಬರಿಮಲೆಗಾಗಿ ನಾವು ಖರ್ಚು ಮಾಡಿದ ಹಣದಷ್ಟು ಯಾವ ಸರ್ಕಾರಗಳೂ ಖರ್ಚು ಮಾಡಿರಲ್ಲ.ಯಾರಿಗೆ ಬೇಕಾದರೂ ಅದರ ಲೆಕ್ಕ ಪರಿಶೋಧನೆ ಮಾಡಬಹುದು.
ನಮ್ಮ ರಾಜ್ಯದ ಪ್ರಮುಖ ದೇಗುಲವಾಗಿದೆ ಶಬರಿಮಲೆ. ಅಲ್ಲಿ ಬರುವ ಹಣವನ್ನುದೇವಸ್ವಂ ಬಳಸುತ್ತಿದೆ.ದಿನ ನಿತ್ಯ ಆದಾಯವಿಲ್ಲದ ದೇವಸ್ಥಾನಗಳಿಗೆ ದೇವಸ್ವಂ ಮಂಡಳಿ ಇದೇ ಹಣವನ್ನು ಖರ್ಚು ಮಾಡುತ್ತಿದೆ.ಅದಲ್ಲದೆ ದೇವಸ್ವಂ ಮಂಡಳಿಗೆ ಸೇರುವ ಹಣ ಸರ್ಕಾರದ ಖಜಾನೆ ತುಂಬುವುದಿಲ್ಲ. ಶಾಂತಿ ಮತ್ತು ಸಮಾಧಾನದ ವಾತಾವರಣವಿರಬೇಕಾದ ಸ್ಥಳವಾಗಿದೆ ಶಬರಿಮಲೆ.ಈ ಬಗ್ಗೆ ಪ್ರತಿಭಟನೆಗಳಿಗೆ ಮುಂದಾಗುವವರು ಸ್ವಲ್ಪ ಚಿಂತಿಸಿ.ಶಬರಿಮಲೆ ಪ್ರತಿಭಟನೆಗಳಿಗೆ ನೇತೃತ್ವ ನೀಡುವ ಒಬ್ಬ ವ್ಯಕ್ತಿ ಸನ್ನಿಧಾನದಲ್ಲಿ ರಕ್ತವೋ , ಮೂತ್ರವೋ ಬೀಳಿಸಲು ಪ್ಲಾನ್ ಮಾಡಿರುವುದಾಗಿ ಹೇಳಿದ್ದಾರೆ. ರಕ್ತ ಬೀಳುವಂತೆ ಮಾಡಲು ಇವರು ಸಿದ್ಧರಿರಲ್ಲ, ಹಾಗಾಗಿ ಮೂತ್ರ ವಿಸರ್ಜನೆಗೆ ಇವರು ಯೋಜನೆ ಹೂಡಿರಬಹುದು.
ಅಮಿತ್ ಶಾ ಅವರ ಮಾತು ಕೇಳಿ ಆರ್‌ಎಸ್‍ಎಸ್‍ನ ವ್ಯಕ್ತಿಗಳು ಶಬರಿಮಲೆಯಲ್ಲಿ ಆಕ್ರಮಣಮಾಡಿದರೆ ಅವರು ಅದಕ್ಕಿರುವ ಶಿಕ್ಷೆ ಅನುಭವಿಸುತ್ತಾರೆ. ಅಯ್ಯಪ್ಪ ಭಕ್ತರಿಗೆ ಯಾವುದೇ ಸಮಸ್ಯೆ ಇರುವುದಿಲ್ಲ.ಶಬರಿಮಲೆಮಾಸ್ಟರ್ ಪ್ಲಾನ್ ಬಗ್ಗೆ ವಿವರವಾಗಿ ಅಧ್ಯಯನ ಮಾಡಿ ವರದಿ ಸಲ್ಲಿಸುವಂತೆ ಸಮಿತಿಯೊಂದಕ್ಕೆ ಸರ್ಕಾರ ಆದೇಶಿಸಿದೆ.
ಈ ಹಿಂದೆ ಪ್ರಧಾನಿಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಟಿ.ಕೆ.ಎ. ನಾಯರ್ ಅವರ ನೇತೃತ್ವದ ಸಮಿತಿ ಶೀಘ್ರದಲ್ಲೇಸರ್ಕಾರಕ್ಕೆ ವರದಿ ಸಲ್ಲಿಸಲಿದೆ, ಶಬರಿಮಲೆಯಲ್ಲಿ ನೂಕು ನುಗ್ಗಲು ನಿಯಂತ್ರಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಆನ್‍ಲೈನ್ ಬುಕಿಂಗ್ ಸೌಕರ್ಯಗಳನ್ನು ನೀಡಲಾಗುವುದು.ನಿಲಯ್ಕಲ್ ನಲ್ಲಿ ಸಾವಿರಮಂದಿಗೆ ಬೇಸ್ ಕ್ಯಾಂಪ್ ನಿರ್ಮಿಸಲಾಗುವುದು.ಶಬರಿಮಲೆಯಲ್ಲಿ ದರ್ಶನ ಸುಲಭ ಸಾಧ್ಯವಾಗುವಂತೆ ಮಾಡಲಾಗುವುದು.ಯಾರೊಬ್ಬರಿಗೂ ಇಲ್ಲಿ ಶಾಶ್ವತವಾಗಿ ಟೆಂಟ್ ಹಾಕಿ ಕುಳಿತುಕೊಳ್ಳಲು ಸಾಧ್ಯವಾಗಲ್ಲ ಎಂದು ಪಿಣರಾಯಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.