ತಿರುವನಂತಪುರ: ಹೆಚ್ಚುತ್ತಿರುವ ಆನ್‌ಲೈನ್ ಹಣಕಾಸು ವಂಚನೆಯನ್ನು ತಡೆಗಟ್ಟಲು ಆರ್ಥಿಕ ವ್ಯವಸ್ಥೆಗೆ ಸಮಗ್ರ ಸೈಬರ್ ಸುರಕ್ಷತೆಯ ಚೌಕಟ್ಟಿನ ಅಗತ್ಯವಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಈ ನಿಟ್ಟಿನಲ್ಲಿ ಕೇಂದ್ರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಜಂಟಿ ಮಧ್ಯಸ್ಥಿಕೆ ವಹಿಸಬೇಕು ಎಂದು ನಾವು ಕೋರಿದ್ದೇವೆ ಎಂದು ಅವರು ತಿಳಿಸಿದರು.
‘ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ಸೈಬರ್ ವಂಚನೆಗಳು ಕೂಡ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಇಂತಹ ವಂಚನೆಗಳನ್ನು ತಡೆಗಟ್ಟಲು ರಾಜ್ಯ ಪೊಲೀಸ್‌ನ ಸೈಬರ್ ವಿಭಾಗವು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುತ್ತಿದೆ’ ಎಂದು ಅವರು ಹೇಳಿದರು.
‘ಸೈಬರ್ ಹಣಕಾಸು ವಂಚನೆಗಳಿಂದ ಸುರಕ್ಷಿತವಾಗಿರುವ ಕುರಿತು ಸಾಮಾಜಿಕ ಜಾಲತಾಣಗಳ ಮೂಲಕ ರಾಜ್ಯದ ಪೊಲೀಸರು ವ್ಯಾಪಕ ಜಾಗೃತಿ ಮೂಡಿಸುತ್ತಿದ್ದಾರೆ. ಕೇರಳದ ಎಲ್ಲ ಜಿಲ್ಲೆಗಳಲ್ಲಿ ಸೈಬರ್ ಪೊಲೀಸ್ ಠಾಣೆಗಳಿವೆ. ಸೈಬರ್ ವಂಚನೆಗಳ ವಿರುದ್ಧ ದೂರು ದಾಖಲಿಸಲು ಜನರಿಗಾಗಿ ಟೋಲ್–ಫ್ರೀ ಸಂಖ್ಯೆ ಮತ್ತು ವೆಬ್‌ಸೈಟ್ ಪ್ರಾರಂಭಿಸಲಾಗಿದೆ’ ಎಂದು ಪಿಣರಾಯಿ ವಿಜಯನ್ ಹೇಳಿದರು.
ರಾಜ್ಯದಲ್ಲಿ ಸೈಬರ್ ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಸುಮಾರು 30,000 ಬ್ಯಾಂಕ್ ಖಾತೆಗಳನ್ನು ನಿರ್ಬಂಧಿಸಲಾಗಿದೆ ಮತ್ತು ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.