ಕೊಲ್ಲಂ(ಕೇರಳ): ಕೋಯಿಕ್ಕೋಡ್‌ನ ಜನನಿಬಿಡ ರಸ್ತೆಯಲ್ಲಿ ಕೇರಳ ರಾಜ್ಯಪಾಲರು ಅನಿರೀಕ್ಷಿತವಾಗಿ ಸುತ್ತಾಡಿ ಗಮನಸೆಳೆದಿದ್ದಾರೆ. ಇದನ್ನು ವ್ಯಂಗ್ಯವಾಗಿ ಟೀಕಿಸಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯು ನಿಯಂತ್ರಣದಲ್ಲಿದೆ ಎಂಬುದು ಅವರಿಗೆ ಮನವರಿಕೆಯಾಗಿರಬೇಕು’ ಎಂದಿದ್ದಾರೆ.
ರಾಜ್ಯಪಾಲ ಅರೀಫ್ ಮೊಹಮ್ಮದ್ ಖಾನ್ ಅವರು ಸೋಮವಾರ ಇಲ್ಲಿನ ಕೋಯಿಕ್ಕೋಡ್‌ನ ಜನನಿಬಿಡ ಎಸ್.ಎಂ.ಸ್ಟ್ರೀಟ್‌ನಲ್ಲಿ ಏಕಾಂಗಿಯಾಗಿ, ಅನಿರೀಕ್ಷಿತವಾಗಿ ಸುತ್ತಾಡಿದ್ದರು.
‘ರಾಜ್ಯಪಾಲರು ಈ ಮೂಲಕ ಕೇರಳ ಎಷ್ಟು ಸುರಕ್ಷಿತ ಎಂಬುದನ್ನು ದೇಶಕ್ಕೇ ತಿಳಿಸಿದ್ದಾರೆ. ಆ ಸ್ಥಾನದಲ್ಲಿ ಇರುವವರು ಹೀಗೆ ಸುತ್ತಾಡಬಹುದಾದ ಯಾವುದಾದರೂ ರಾಜ್ಯ ಇದೆಯೇ’ ಎಂದು ಸಿ.ಎಂ ಪ್ರಶ್ನಿಸಿದರು. ಮುಖ್ಯಮಂತ್ರಿ–ರಾಜ್ಯಪಾಲರ ವಾಕ್ಸಮರದ ಹಿನ್ನೆಲೆಯಲ್ಲಿ ಈಚೆಗೆ ರಾಜ್ಯಪಾಲರು ರಾಜ್ಯ ಸರ್ಕಾರ ಮತ್ತು ಪೊಲೀಸರ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಪೊಲೀಸ್ ರಕ್ಷಣೆ ತಿರಸ್ಕರಿಸಿ, ಏಕಾಏಕಿ ಜನನಿಬಿಡ ರಸ್ತೆಯಲ್ಲಿ ಸುತ್ತಾಡಿದ ರಾಜ್ಯಪಾಲರ ನಡೆಗೆ ಆಕ್ಷೇಪಿಸಿದ ಮುಖ್ಯಮಂತ್ರಿ, ಆಯಕಟ್ಟಿನ ಸ್ಥಾನದಲ್ಲಿರುವವರು ಶಿಷ್ಟಾಚಾರಕ್ಕೆ ವಿರುದ್ಧವಾಗಿ ತಮಗೆ ಅನಿಸಿದಂತೆ ನಡೆದುಕೊಳ್ಳುವುದು ಸರಿಯಲ್ಲ ಎಂದು ಟೀಕಿಸಿದರು.
‘ರಾಜ್ಯಪಾಲರ ನಡೆಯು ಶಿಷ್ಟಾಚಾರದ ಉಲ್ಲಂಘನೆ. ಕೇರಳದ ಪೊಲೀಸರು ರಾಜ್ಯಪಾಲರಿಗೆ ಝಡ್ ಪ್ಲಸ್ ರಕ್ಷಣೆ ಒದಗಿಸುವುದನ್ನು ಮುಂದುವರಿಸಲಿದ್ದಾರೆ’ ಎಂದು ಹೇಳಿದರು.
ಮಿಠಾಯಿ ಥೆರುವು ಎಂದೇ ಹೆಸರಾಗಿರುವ ಕೋಯಿಕ್ಕೋಡ್‌ನ ಪ್ರಮುಖ ಎಸ್.ಎಂ.ಸ್ಟ್ರೀಟ್‌ನಲ್ಲಿ ಓಡಾಡಿದ್ದ ರಾಜ್ಯಪಾಲರು, ಕೆಲ ಗಂಟೆ ಕಾಲ ಜನರ ಜೊತೆಗೆ ಬೆರೆತಿದ್ದರು. ಸಂವಾದ ನಡೆಸಿ, ಫೋಟೊಗೆ ಪೋಸ್ ನೀಡಿದ್ದರು. ಬಳಿಕ ವಾಸ್ತವ್ಯ ಹೂಡಿದ್ದ ಕ್ಯಾಲಿಕಟ್ ವಿಶ್ವವಿದ್ಯಾಲಯದ ಅತಿಥಿಗೃಹಕ್ಕೆ ಮರಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.