ADVERTISEMENT

ಸ್ವಪ್ನಾ ಸುರೇಶ್‌ ಹೇಳಿಕೆಗೆ ಕೇರಳ ಸಿ.ಎಂ ಕಚೇರಿ ಪ್ರತ್ಯುತ್ತರ 

​ಪ್ರಜಾವಾಣಿ ವಾರ್ತೆ
Published 15 ಜೂನ್ 2022, 11:16 IST
Last Updated 15 ಜೂನ್ 2022, 11:16 IST
ಸ್ವಪ್ನಾ ಸುರೇಶ್‌
ಸ್ವಪ್ನಾ ಸುರೇಶ್‌   

ತಿರುವನಂತಪುರ:ಚಿನ್ನ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಅವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಅವರ ಕುಟುಂಬದೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾಗಿ ನೀಡಿರುವ ಇತ್ತೀಚಿನ ಹೇಳಿಕೆಗೆ ಪ್ರತಿಯಾಗಿ ಮುಖ್ಯಮಂತ್ರಿ ಕಚೇರಿಯು ಬುಧವಾರ ಎರಡು ವರ್ಷಗಳ ಹಿಂದಿನ ವಿಡಿಯೊ ಬಿಡುಗಡೆ ಮಾಡಿದೆ.

ಯುಎಇಯ ಆಗಿನ ಕಾನ್ಸುಲೇಟ್ ಜನರಲ್ ಜೊತೆಗೆ ಸ್ವಪ್ನಾ ಅವರು ಹಲವು ಬಾರಿ ಮುಖ್ಯಮಂತ್ರಿಯವರ ಅಧಿಕೃತ ನಿವಾಸದಲ್ಲಿ ಕಚೇರಿ ಕೆಲಸದ ನಿಮಿತ್ತ ಭೇಟಿ ಮಾಡಿದ್ದರು ಎಂದು ಸಮರ್ಥನೆ ನೀಡಿದೆ.

‘ತನಗೆ ಆಕೆ ಯಾರೆಂಬುದು ಗೊತ್ತಿಲ್ಲ’ ಎಂದಿರುವ ಪಿಣರಾಯಿ ವಿಜಯನ್‌ ಅವರ ಸುಳ್ಳು ಬಯಲು ಮಾಡುವೆ ಎಂದು ಸ್ವಪ್ನಾ ಸುರೇಶ್ ಮಂಗಳವಾರ ಬೆದರಿಕೆ ಹಾಕಿದ ಬೆನ್ನಲ್ಲೇ, ಮುಖ್ಯಮಂತ್ರಿ ಕಚೇರಿಯ ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಿರುವ ಎರಡು ಕಿರು ವಿಡಿಯೊ ತುಣುಕುಗಳಲ್ಲಿ ‘ಆಕೆ ಕಾನ್ಸುಲೇಟ್ ಸಿಬ್ಬಂದಿ ಎಂಬುದು ತಿಳಿದಿದೆ’ ಎಂದು ವಿಜಯನ್‌ ನೀಡಿರುವ ಹೇಳಿಕೆ ಇದೆ.ಪಿಣರಾಯಿ ವಿಜಯನ್‌ ಅವರ ಈ ಹಿಂದಿನಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಚಿನ್ನ ಕಳ್ಳಸಾಗಣೆ ಪ್ರಕರಣ ರಾಜಕೀಯ ಸ್ವರೂಪ ಪಡೆದಾಗ, 2020ರಅಕ್ಟೋಬರ್ 13ರಂದು ಪತ್ರಿಕಾಗೋಷ್ಠಿಯಲ್ಲಿ ಎದುರಾದ ಪ್ರಶ್ನೆಯೊಂದಕ್ಕೆ ಪಿಣರಾಯಿ ಈ ಹೇಳಿಕೆ ನೀಡಿದ್ದರು.

ADVERTISEMENT

‘ಸ್ವಪ್ನಾ ಸುರೇಶ್ ಅವರು ತಮ್ಮ ಅಧಿಕೃತ ನಿವಾಸ ಕ್ಲಿಫ್ ಹೌಸ್‌ಗೆ ಹಲವು ಬಾರಿ ಭೇಟಿ ನೀಡಿದ್ದರಾ?’ ಎಂದು ಪತ್ರಕರ್ತರೊಬ್ಬರು ಕೇಳಿದಾಗ, ವಿಜಯನ್ ಅವರು, ‘ಹೌದು,ರಾಜಧಾನಿಯಲ್ಲಿರುವ ಯುಎಇ ಕಾನ್ಸುಲೇಟ್‌ನ ಕಾರ್ಯಕ್ರಮಗಳಿಗೆ ಆಹ್ವಾನಿಸಲು ಮತ್ತು ಕಚೇರಿಯ ಅಧಿಕೃತ ಕೆಲಸಗಳ ಉದ್ದೇಶಗಳಿಗಾಗಿ ಕಾನ್ಸುಲೇಟ್ ಜನರಲ್ ಜತೆಗೆ ಹಲವು ಬಾರಿ ಬಂದಿದ್ದಾರೆ’ ಎಂದು ಉತ್ತರಿಸಿರುವುದು ವಿಡಿಯೊ ತುಣುಕಿನಲ್ಲಿದೆ.

ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ 16 ತಿಂಗಳ ಬಳಿಕ ಕಳೆದ ವರ್ಷ ನವೆಂಬರ್‌ನಲ್ಲಿ ಜೈಲಿನಿಂದ ಬಿಡುಗಡೆಯಾಗಿರುವ ಸ್ವಪ್ನಾ ಸುರೇಶ್‌,ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಅವರ ಕುಟುಂಬ ಸದಸ್ಯರು ಮತ್ತು ಕೆಲವು ಉನ್ನತ ಅಧಿಕಾರಿಗಳ ವಿರುದ್ಧ ಕೆಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.