ADVERTISEMENT

ಲೈಂಗಿಕ ಕಿರುಕುಳ ಆರೋಪಿಗೆ ಜಾಮೀನು: ಪ್ರಚೋದನಾಕಾರಿ ಉಡುಗೆ ಉಲ್ಲೇಖಿಸಿದ ಕೋರ್ಟ್‌

ಅರ್ಜುನ್ ರಘುನಾಥ್
Published 17 ಆಗಸ್ಟ್ 2022, 14:27 IST
Last Updated 17 ಆಗಸ್ಟ್ 2022, 14:27 IST
ಸಾಂದರ್ಭಿಕ ಚಿತ್ರ (ಕೃಪೆ – ಐಸ್ಟಾಕ್)
ಸಾಂದರ್ಭಿಕ ಚಿತ್ರ (ಕೃಪೆ – ಐಸ್ಟಾಕ್)   

ತಿರುವನಂತಪುರ: ದೂರುದಾರ ಮಹಿಳೆ ಧರಿಸಿದ್ದ ದಿರಿಸಿನ ಆಧಾರದ ಮೇಲೆ ಲೈಂಗಿಕ ಕಿರುಕುಳ ಪ್ರಕರಣವೊಂದರಲ್ಲಿ 74 ವರ್ಷ ವಯಸ್ಸಿನ ಆರೋಪಿಗೆ ಕೇರಳದ ಕೋಯಿಕ್ಕೋಡ್‌ನ ಸೆಷನ್ಸ್‌ ನ್ಯಾಯಾಲಯವೊಂದು ನಿರೀಕ್ಷಣಾ ಜಾಮೀನು ನೀಡಿದೆ.

ಬರಹಗಾರ, ಸಾಮಾಜಿಕ ಕಾರ್ಯಕರ್ತ ಸಿವಿಕ್‌ ಚಂದ್ರನ್‌ ವಿರುದ್ಧ 30 ವರ್ಷ ವಯಸ್ಸಿನ ಮಹಿಳೆಯೊಬ್ಬರು ಲೈಂಗಿಕ ಕಿರುಕುಳ ಮೊಕದ್ದಮೆ ದಾಖಲಿಸಿದ್ದರು. 2020ರ ಫೆಬ್ರುವರಿಯಲ್ಲಿ ಕೋಯೊಕ್ಕೋಡ್‌ ಕಡಲ ತೀರದಲ್ಲಿ ಶಿಬಿರ ಹೂಡಿದ್ದ ವೇಳೆ ಚಂದ್ರನ್‌ ಅವರು ತಮ್ಮನ್ನು ನಿರ್ಜನ ಸ್ಥಳಕ್ಕೆ ಕರೆದುಕೊಂಡು ಹೋಗಿ ಲೈಂಗಿಕ ಕಿರುಕುಳ ನೀಡಿದ್ದರು ಎಂದು ದೂರಿನಲ್ಲಿ ಮಹಿಳೆ ಹೇಳಿದ್ದರು.

ಈ ಪ್ರಕರಣದಲ್ಲಿ ಆರೋಪಿಗೆ ನಿರೀಕ್ಷಣಾ ಜಾಮೀನು ನೀಡಿರುವ ಸೆಷನ್ಸ್‌ ನ್ಯಾಯಾಧೀಶ ಎಸ್‌. ಕೃಷ್ಣ ಕುಮಾರ್‌, ಜಾಮೀನು ಅರ್ಜಿ ಜೊತೆ ಆರೋಪಿಯು ಚಿತ್ರಗಳನ್ನು ಒದಗಿಸಿದ್ದಾರೆ. ಆ ಚಿತ್ರಗಳನ್ನು ಪರಿಶೀಲಿಸಲಾಯಿತು. ‘ಲೈಂಗಿಕವಾಗಿ ಪ್ರಚೋದನಾಕಾರಿಯಾದ ಉಡುಗೆಗಳನ್ನು ದೂರುದಾರ ಮಹಿಳೆಯು ಧರಿಸಿರುವುದು ಕಂಡುಬಂದಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 354ಎ (ಒತ್ತಾಯಪೂರ್ವಕ ಲೈಂಗಿಕ ದೌರ್ಜನ್ಯ) ಅಡಿ ಆರೋಪಿಯ ಅಪರಾಧವು ಮೇಲ್ನೋಟಕ್ಕೆ ಸಾಬೀತಾಗಿಲ್ಲ’ ಎಂದು ಹೇಳಿದ್ದಾರೆ.

ಅಲ್ಲದೇ, ಆರೋಪಿಯು 74 ವರ್ಷ ವಯಸ್ಸಿನವರು. ದೈಹಿಕವಾಗಿ ಅಸಮರ್ಥರು. ಹಾಗಾಗಿ ಅವರು ಮಹಿಳೆ ಮೇಲೆ ಒತ್ತಾಯವಾಗಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂಬುದನ್ನು ನಂಬಲು ಸಾಧ್ಯವಿಲ್ಲ. ಆರೋಪಿಯು ಸಮಾಜದಲ್ಲಿ ಒಳ್ಳೆಯ ಹೆಸರು ಹೊಂದಿದ್ದಾರೆ. ಅವರ ಮೊದಲ ಮಗಳು ಜಿಲ್ಲಾಧಿಕಾರಿ ಮತ್ತು ಎರಡನೇ ಮಗಳು ಸಹಾಯಕ ಪ್ರಾಧ್ಯಾಪಕಿ ಆಗಿದ್ದಾರೆ ಎಂಬ ಅಂಶಗಳನ್ನೂ ನ್ಯಾಯಾಧೀಶರು ಒತ್ತಿ ಹೇಳಿದ್ದಾರೆ.

ದೌರ್ಜನ್ಯದ ಕುರಿತ ಅರ್ಜಿಯನ್ನು ಮಹಿಳೆ ತಡವಾಗಿ ಸಲ್ಲಿಸಿದ್ದನ್ನು ಪ್ರಶ್ನಿಸಿದ್ದರ ಜೊತೆಗೆ, 30 ವರ್ಷದ ಮಹಿಳೆಯು ಸಮಾಜದಲ್ಲಿ ಉತ್ತಮ ಹೆಸರು ಸಂಪಾದಿಸಿರುವ ವ್ಯಕ್ತಿಯ ವಿರುದ್ಧ ದೂರು ನೀಡಿದ್ದು ದುರಾದೃಷ್ಟಕರ ಎಂದಿದ್ದಾರೆ.

ಇದು ಚಂದ್ರನ್‌ ಅವರ ವಿರುದ್ಧದ ಎರಡನೇ ಲೈಂಗಿಕ ದೌರ್ಜನ್ಯ ಪ್ರಕರಣ. ದಲಿತ ಲೇಖಕಿ ಒಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದ ಪ್ರಕರಣದಲ್ಲಿ ಅವರು 2022ರ ಏಪ್ರಿಲ್‌ನಲ್ಲಿ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.