ಕೊಚ್ಚಿ: ಪ್ರಾಧ್ಯಾಪಕರೊಬ್ಬರ ಕೈ ಕತ್ತರಿಸಿದ ಪ್ರಕರಣದಲ್ಲಿ ಆರು ಮಂದಿಯನ್ನು ದೋಷಿಗಳೆಂದು ಘೋಷಿಸಿದ್ದು, ಐದು ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿ ಕೇರಳದ ವಿಶೇಷ ಎನ್‌ಐಎ ನ್ಯಾಯಾಲಯ ಬುಧವಾರ ತೀರ್ಪು ನೀಡಿದೆ.
ಎಂ.ಕೆ. ನಾಸರ್, ಸಾಜಿಲ್, ನಜೀಬ್, ಎಂ.ಕೆ. ನೌಶಾದ್, ಪಿ.ಪಿ. ಮೊಹಮದ್ ಕುಂಜು ಮತ್ತು ಪಿ.ಎಂ. ಅಯೂಬ್ ಅವರನ್ನು ತಪ್ಪಿತಸ್ಥರೆಂದು ನ್ಯಾಯಾಲಯ ಘೋಷಿಸಿದೆ. ಇವರೆಲ್ಲರೂ ನಿಷೇಧಿತ ಇಸ್ಲಾಮಿಕ್ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸದಸ್ಯರಾಗಿದ್ದಾರೆ.
ಕೇರಳದ ಇಡುಕ್ಕಿ ಜಿಲ್ಲೆಯ ತೊಡುಪುಳದ ನ್ಯೂಮನ್ ಕಾಲೇಜಿನ ವಾಣಿಜ್ಯ ವಿಷಯ ಪ್ರಾಧ್ಯಾಪಕ ಪ್ರೊ. ಟಿ.ಜೆ. ಜೋಸೆಫ್ ಅವರ ಕೈಯನ್ನು 2010ರ ಜುಲೈ 4ರಂದು ಕತ್ತರಿಸಲಾಗಿತ್ತು.
ಬಿ.ಕಾಂ. ಸೆಮಿಸ್ಟರ್ ಪ್ರಶ್ನೆಪತ್ರಿಕೆಯಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡುವ ರೀತಿಯಲ್ಲಿ ಪ್ರಶ್ನೆ ಕೇಳಲಾಗಿದೆ ಎಂಬ ಆರೋಪದ ಮೇಲೆ ಈ ಕೃತ್ಯ ಎಸಗಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ 1 2015ರಂದು 13 ಮಂದಿಯನ್ನು ಅಪರಾಧಿಗಳೆಂದು ಪರಿಗಣಿಸಿ ಎನ್‌ಐಎ ವಿಶೇಷ ನ್ಯಾಯಾಲಯ ಆದೇಶಿಸಿತ್ತು. ಇದೇ ಪ್ರಕರಣದಲ್ಲಿ ಭಾಗಿಯಾಗಿದ್ದರೆ ಎನ್ನಲಾದ ಇತರ 18 ಮಂದಿಯನ್ನು ಸೂಕ್ತ ಸಾಕ್ಷಾಧಾರಗಳಿಲ್ಲ ಎಂಬ ಕಾರಣಕ್ಕೆ ನ್ಯಾಯಾಧೀಶ ಪಿ. ಶಶಿಧರನ್ ಅವರು ಖುಲಾಸೆಗೊಳಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು, 30 ಪ್ರಾಸಿಕ್ಯೂಷನ್ ಸಾಕ್ಷಿಗಳು, ನಾಲ್ವರು ಪರ ಸಾಕ್ಷಿಗಳ ವಿಚಾರಣೆ ನಡೆಸಿತ್ತು. ಅಂತಿಮವಾಗಿ ನ್ಯಾಯಾಲಯ 13 ಮಂದಿಯನ್ನು ಅಪರಾಧಿಗಳೆಂದು ಘೋಷಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.