ADVERTISEMENT

ಹಣ ಅಕ್ರಮ ವರ್ಗಾವಣೆ ಪ್ರಕರಣ: ಸಿಪಿಐ(ಎಂ)ಗೆ ಸೇರಿದ ಭೂಮಿ, ಬ್ಯಾಂಕ್ ಠೇವಣಿ ಜಪ್ತಿ

ಜಾರಿ ನಿರ್ದೇಶನಾಲಯದಿಂದ ಕ್ರಮ

ಪಿಟಿಐ
Published 29 ಜೂನ್ 2024, 16:01 IST
Last Updated 29 ಜೂನ್ 2024, 16:01 IST
ಸಿಪಿಐ (ಎಂ)
ಸಿಪಿಐ (ಎಂ)   

ಕೊಚ್ಚಿ: ಕರುವನ್ನೂರು ಸರ್ವೀಸ್‌ ಕೋ– ಆಪರೇಟಿವ್‌ ಬ್ಯಾಂಕ್‌ ಹಗರಣದ ಅಕ್ರಮ ಹಣ ವರ್ಗಾವಣೆಯಲ್ಲಿ‌ ಸಿಪಿಐ(ಎಂ) ಭಾಗಿಯಾಗಿರುವುದು ಕಂಡುಬಂದ ಬೆನ್ನಲ್ಲೇ ಜಾರಿ ನಿರ್ದೇಶನಾಲಯವು ಪಕ್ಷಕ್ಕೆ ಸೇರಿದ ಭೂಮಿ, ₹63 ಲಕ್ಷ ಬ್ಯಾಂಕ್‌ ಠೇವಣಿಯನ್ನು ಜಪ್ತಿ ಮಾಡಿದೆ ಅಧಿಕೃತ ಮೂಲಗಳು ತಿಳಿಸಿವೆ.

ತನ್ನ ಮೇಲಿನ ಆರೋಪ ಹಾಗೂ ತಪ್ಪು ಎಸಗಿರುವುದನ್ನು ಸಿಪಿಐ(ಎಂ) ತಿರಸ್ಕರಿಸಿದೆ.

ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಆಸ್ತಿ ಜಪ್ತಿ‌ ಮಾಡಲು ತಾತ್ಕಾಲಿಕ ಆದೇಶ ಹೊರಡಿಸಲಾಗಿದೆ ಎಂದು ಮೂಲ‌ಗಳು ತಿಳಿಸಿವೆ.

ADVERTISEMENT

ತ್ರಿಶೂರ್‌ ಜಿಲ್ಲೆಯಲ್ಲಿದ್ದ ₹10 ಲಕ್ಷ ಮೌಲ್ಯದ ಭೂಮಿ, ರಾಜಕೀಯ ಪಕ್ಷವು ಬಹಿರಂಗಪಡಿಸದ ಐದು ಬ್ಯಾಂಕ್ ಖಾತೆಗಳಲ್ಲಿ ಇಡಲಾದ ₹63 ಲಕ್ಷ ಠೇವಣಿಯನ್ನು ಜಪ್ತಿ ಮಾಡಲಾಗಿದೆ.

ಜಾರಿ ನಿರ್ದೇಶನಾಲಯ ಮಾಡಿದ ಎಲ್ಲ ಆರೋಪಗಳನ್ನು ಸಿಪಿಐ(ಎಂ) ಪಕ್ಷ ನಿರಾಕರಿಸಿದೆ. ಈ ಪ್ರಕರಣದಲ್ಲಿ ಕಾನೂನಾತ್ಮಕ, ರಾಜಕೀಯವಾಗಿ ಹೋರಾಟ ನಡೆಸುವುದಾಗಿ ತಿಳಿಸಿದೆ.

‘ವಿವಿಧ ಪ್ರಕರಣಗಳಲ್ಲಿ ವಿರೋಧ ಪಕ್ಷಗಳು, ಮುಖಂಡರನ್ನು ರಾಜಕೀಯ ಕಾರಣದಿಂದ ಇ.ಡಿ ಗುರಿಯಾಗಿಸುತ್ತಿದೆ. ಪಕ್ಷ ವಿರುದ್ಧ ಯಾವುದೇ ಸಾಕ್ಷಿ ಸಂಗ್ರಹಿಸದೇ, ಗೊಂದಲ ಸೃಷ್ಟಿಸುತ್ತಿದೆ ‌’ ಎಂದು ಪಕ್ಷದ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್‌ ತಿಳಿಸಿದ್ದಾರೆ.

ಕರುವನ್ನೂರು ಸರ್ವೀಸ್‌ ಕೋ– ಆಪರೇಟಿವ್‌ ಬ್ಯಾಂಕ್‌ನಿಂದ ಸಾಲ ಪಡೆದ ಫಲಾನುಭವಿಗಳಿಂದ ಕಿಕ್‌ಬ್ಯಾಕ್‌ ಪಡೆದ ಹಣದಿಂದಲೇ ಸಿಪಿಐ(ಎಂ) ಪಕ್ಷವು ಜಪ್ತಿ ಮಾಡಿದ ಜಾಗ ಖರೀದಿಸಿತ್ತು ಎಂದು ಇ.ಡಿ. ಅಧಿಕಾರಿಗಳು ತಿಳಿಸಿದ್ದಾರೆ.

ತ್ರಿಶೂರ್‌ ಸಿಪಿಐ(ಎಂ)ನ ಜಿಲ್ಲಾ ನಾಯಕರ ಸೂಚನೆಯಂತೆ ಬ್ಯಾಂಕ್‌ನಲ್ಲಿ ಅಕ್ರಮ ನಡೆದಿದೆ ಎಂದು ಈ ಪ್ರಕರಣದಲ್ಲಿ ಬಂಧಿತರಾದ ಇಬ್ಬರು ಆರೋಪಿಗಳು ನ್ಯಾಯಾಂಗದ ಮುಂದೆ ನೀಡಿದ ತಪ್ಪೊಪ್ಪಿಗೆ ಹೇಳಿಕೆಯನ್ನು ಇ.ಡಿ. ಅಧಿಕಾರಿಗಳು ಉಲ್ಲೇಖಿಸಿದ್ದಾರೆ.

‘ಪಕ್ಷದ ವಿವಿಧ ಜಿಲ್ಲಾ ಸಮಿತಿಗಳ ಹೆಸರಿನಲ್ಲಿ ಆಸ್ತಿ ನೋಂದಣಿ ಮಾಡುವ ಪ್ರಕ್ರಿಯೆ ದೀರ್ಘಕಾಲದಿಂದಲೂ ಜಾರಿಯಲ್ಲಿದೆ. ಆದರೆ, ಸ್ಥಳೀಯ ಸಮಿತಿ ಯಾ‌ವ ಪಾತ್ರ ವಹಿಸಿದೆ ಎಂಬುದನ್ನು ತನಿಖಾ ಸಂಸ್ಥೆ ತಿಳಿಸಿಲ್ಲ. ಸಿಪಿಐ(ಎಂ) ವರ್ಚಸ್ಸನ್ನು ಹಾಳುಗೆಡವಲು ಪಕ್ಷಕ್ಕೆ ಸೇರಿದ ಆಸ್ತಿ ಜಪ್ತಿ ಮಾಡಿದೆ’ ಎಂದು ಗೋವಿಂದನ್‌ ತಿಳಿಸಿದ್ದಾರೆ.

ತ್ರಿಶೂರ್‌ ಮೂಲದ ಸಿಪಿಐ(ಎಂ) ನಿಯಂತ್ರಣದಲ್ಲಿದ್ದ ಬ್ಯಾಂಕ್‌ನಲ್ಲಿ 2010ರಿಂದ ಅಕ್ರಮಗಳು ಆರಂ‌ಭ‌ವಾಗಿತ್ತು. ಹಣ ಅಕ್ರಮ ಹಣ ವರ್ಗಾವಣೆ ಸಂಬಂಧ ಕೇರಳ ಪೊಲೀಸರು (ಕ್ರೈಂ ಬ್ರಾಂಚ್‌) 16 ಎಫ್‌ಐಆರ್‌ಗಳನ್ನು ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ₹100 ಕೋಟಿ ಮೌಲ್ಯದ 120 ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ ಎಂದು ಇ.ಡಿ. ನ್ಯಾಯಾಲಯಕ್ಕೆ ತಿಳಿಸಿದೆ.

‘ಬ್ಯಾಂಕ್‌ನ ಸದಸ್ಯರ ಗಮನಕ್ಕೆ ತಾರದೇ ಒಂದೇ ಆಸ್ತಿಗೆ ಹಲವಾರು ಸಲ ಸಾಲ ನೀಡಿದ್ದು, ಈ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ’ ಎಂದು  ಜಾರಿ ನಿರ್ದೇಶ‌ನಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.