ಪತ್ತನಂತಿಟ್ಟ: ಕೇರಳದಲ್ಲಿ ಪಾದ್ರಿಯೊಬ್ಬರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ವಾಪಾಸ್ಸಾಗುವಾಗ ನೇಪಾಳದಲ್ಲಿ ನಡೆದ ವಿಮಾನ ದುರಂತದಲ್ಲಿ ಮೂವರು ಮೃತಪಟ್ಟಿರುವ ವಿವರ ಈಗ ಬೆಳಕಿಗೆ ಬಂದಿದೆ.
ಮೃತರನ್ನು ರಾಜು, ರಾಬಿನ್ ಮತ್ತು ಅನಿಲ್ ಎಂದು ಗುರುತಿಸಲಾಗಿದೆ.
ನೇಪಾಳದಲ್ಲಿ 45 ವರ್ಷ ಸೇವೆ ಸಲ್ಲಿಸಿದ್ದ ಕೇರಳದ ಪತ್ತನಂತಿಟ್ಟ ಮೂಲದ ಪಾದ್ರಿ ಮ್ಯಾಥ್ಯೂ ಫಿಲಿಪ್ (76) ಜನವರಿ 11ರಂದು ನಿಧನರಾದರು. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಪಿಲಿಪ್ ಎರಡು ವರ್ಷಗಳ ಹಿಂದೆಯಷ್ಟೇ ಕೇರಳಕ್ಕೆ ವಾಪಸ್ಸಾಗಿದ್ದರು.
ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಸ್ನೇಹಿತರಾದ ರಾಜು, ರಾಬಿನ್ ಮತ್ತು ಅನಿಲ್ ಸೇರಿದಂತೆ ಐದು ಮಂದಿ ನೇಪಾಳದಿಂದ ಆಗಮಿಸಿದ್ದರು.
ಇದನ್ನೂ ಓದಿ: ನೇಪಾಳ ವಿಮಾನ ಪತನ: ಐವರು ಭಾರತೀಯರೂ ಸೇರಿ 68 ಮಂದಿ ಸಾವು
ಅಂತ್ಯಕ್ರಿಯೆಯು ಜನವರಿ 13ರಂದು ನೆರವೇರಿತ್ತು. ಬಳಿಕ ಕೊಚ್ಚಿಯಿಂದ ಮುಂಬೈ ಮತ್ತು ಕಠ್ಮಂಡು ಮಾರ್ಗವಾಗಿ ನೇಪಾಳಕ್ಕೆ ಹಿಂತಿರುಗಿದ್ದರು.
ಅದೃಷ್ಟವಶಾತ್ ದೀಪಕ್ ಹಾಗೂ ಸರನ್ ಕಠ್ಮಂಡುವಿನಿಂದ ವಿಮಾನ ಹತ್ತಿರಲಿಲ್ಲ. ಆದರೆ ಉಳಿದ ಮೂವರು ನೇಪಾಳದಲ್ಲಿ ಕಳೆದ 30 ವರ್ಷಗಳಲ್ಲೇ ನಡೆದ ಅತ್ಯಂತ ಭೀಕರ ವಿಮಾನ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ.
ನಮಗೆ ಬಂದಿರುವ ವಾರ್ತೆ ನಿಜಕ್ಕೂ ಬೆಚ್ಚಿ ಬೀಳಿಸಿದೆ ಎಂದು ಪಿಲಿಪ್ ಸಹೋದರ ಥಾಮಸ್, ಬೇಸರ ತೋಡಿಕೊಂಡಿದ್ದಾರೆ. ಇಡೀ ಕುಟುಂಬವೇ ಶೋಕತಪ್ತವಾಗಿದೆ.
ನೇಪಾಳದ ಪೊಖರಾದಲ್ಲಿ ಭಾನುವಾರ ಪ್ರಯಾಣಿಕ ವಿಮಾನ ಪತನಗೊಂಡು 68 ಮಂದಿ ಮೃತಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.