ADVERTISEMENT

ಕೇರಳ ಪ್ರವಾಹ: ಪರಿಹಾರ ನಿಧಿಗೆ ₹700 ಕೋಟಿ ದೇಣಿಗೆ ನೀಡಿದ ಯುಎಇ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2018, 10:06 IST
Last Updated 21 ಆಗಸ್ಟ್ 2018, 10:06 IST
ಪ್ರಾತಿನಿಧಿಕ ಚಿತ್ರ (ಪಿಟಿಐ)
ಪ್ರಾತಿನಿಧಿಕ ಚಿತ್ರ (ಪಿಟಿಐ)   

ತಿರುವನಂತಪುರ: ಕೇರಳ ನೆರೆ ಪರಿಹಾರ ನಿಧಿಗೆ ಯುಎಇ (ಯುನೈಟೆಡ್‌ ಅರಬ್‌ ಎಮಿರೇಟ್ಸ್‌) ದೇಶ ₹ 700 ಕೋಟಿ ದೇಣಿಗೆ ನೀಡಲಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳವಾರ ತಿಳಿಸಿದ್ದಾರೆ.

ಆಗಸ್ಟ್‌ 30ರಂದು ವಿಶೇಷ ಅಧಿವೇಶನ ಕರೆದು ಪ್ರವಾಹ ಪರಿಹಾರ ಕಾರ್ಯಗಳ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆಗಳಿವೆ. ವಿಶೇಷ ಅಧಿವೇಶನ ಕರೆಯುವ ಬಗ್ಗೆ ಈಗಾಗಲೇ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ರಾಜ್ಯಪಾಲರಿಗೆ ಮನವಿ ಮಾಡಲಾಗಿದೆ. ಈ ಅಧಿವೇಶನದಲ್ಲಿ ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳ ಬಗ್ಗೆ ಚರ್ಚೆ ಮಾಡಲಾಗುವುದು ಎಂದು ಪಿಣರಾಯಿ ವಿಜಯನ್‌ ತಿಳಿಸಿದ್ದಾರೆ.

ಮಳೆ ಇಳಿಮುಖವಾಗಿರುವುದರಿಂದ ಸದ್ಯದ ಸ್ಥಿತಿಗತಿಗಳ ಬಗ್ಗೆ ಚರ್ಚಿಸಲು ಮಂಗಳವಾರ ಸಂಜೆ ಸರ್ವಪಕ್ಷ ಸಭೆ ಕರೆಯಲಾಗಿದೆ.

ADVERTISEMENT

ಕಳೆದ ಶನಿವಾರ ಯುಎಇ ಅಧ್ಯಕ್ಷರು ಮತ್ತು ಪ್ರಧಾನ ಮಂತ್ರಿ ಶೇಖ್ ಮೊಹಮ್ಮದ್ ಬಿನ್ ರಶೀದ್‌ ಅಲ್ ಮುಕ್ತುಮ್ ಅವರು ಪ್ರವಾಹ ಪೀಡಿತ ಕೇರಳ ಜನರ ಸಹಾಯಕ್ಕೆ ರಾಷ್ಟ್ರೀಯ ತುರ್ತು ಸಮಿತಿ ರಚಿಸಿ ಪರಿಹಾರ ನೀಡುವಂತೆ ಸೂಚನೆ ನೀಡಿದ್ದಾರೆ. ಕೇರಳ ಜನರಿಗೆ ಪ್ರತಿಯೊಬ್ಬರು ಸಹಾಯ ಮಾಡಬೇಕು, ನಮ್ಮ ಯಶಸ್ಸಿನ ಹಿಂದೆ ಕೇರಳ ಜನರ ಪಾತ್ರವಿದೆ, ನಾವು ವಿಶೇಷ ಕಾಳಜಿ ವಹಿಸಿ ಅವರಿಗೆ ನೆರವು ನೀಡಬೇಕು ಎಂದು ಯುಎಇ ಪ್ರಧಾನ ಮಂತ್ರಿ ಟ್ವೀಟ್ ಮಾಡಿದ್ದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ,ಶೇಖ್ ಮೊಹಮ್ಮದ್ ಬಿನ್ ರಶೀದ್‌ ಅಲ್ ಮುಕ್ತುಮ್ ಅವರಿಗೆ ಟ್ವೀಟ್‌ ಮೂಲಕ ಕಷ್ಟದಲ್ಲಿರುವ ಕೇರಳ ಜನರಿಗೆ ಸಹಾಯ ಮಾಡಿರವುದಕ್ಕೆ ತುಂಬಾ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದರು.

ಕಳೆದ ವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೇರಳಕ್ಕೆ ಭೇಟಿ ನೀಡಿ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ್ದರು. ಪರಿಹಾರ ಕಾರ್ಯಗಳಿಗೆ ₹500 ಕೋಟಿ ಘೋಷಣೆ ಮಾಡಿದ್ದರು. ತಕ್ಷಣಕ್ಕೆ ₹100 ಕೋಟಿ ಬಿಡುಗಡೆ ಮಾಡಿದ್ದರು.

ಪ್ರವಾಹದಲ್ಲಿ ಮೃತಪಟ್ಟವರ ಕುಟುಂಬಕ್ಕೆ ₹2 ಲಕ್ಷ ಹಾಗೂ ಗಾಯಗೊಂಡವರಿಗೆ ₹50,000 ಪರಿಹಾರ ಧನ ಘೋಷಣೆ ಮಾಡಿದ್ದಾರೆ. ಪ್ರಧಾನ ಮಂತ್ರಿ ಗ್ರಾಮೀಣ ಆವಾಸ್‌ ಯೋಜನೆ ಅಡಿಯಲ್ಲಿ ಮನೆ ಕಳೆದುಕೊಂಡವರಿಗೆ ಮನೆ ನಿರ್ಮಿಸಿ ಕೊಡಲಾಗುವುದು ಎಂದು ಪ್ರಧಾನಿ ಮಂತ್ರಿ ತಿಳಿಸಿದ್ದಾರೆ.

ಭೀಕರ ಮಳೆ ಅವಾಂತರದಿಂದ ಒಟ್ಟು ₹19.512 ಕೋಟಿ ನಷ್ಟವಾಗಿದೆ. ರಸ್ತೆಗಳ ನಿರ್ಮಾಣಕ್ಕೆ ₹13000 ಕೋಟಿ ಅಗತ್ಯವಿದೆ ಎಂದು ಪಿಣರಾಯಿ ವಿಜಯನ್‌ ತಿಳಿಸಿದ್ದಾರೆ.

ಕೇರಳದ ನೆರೆ ಸಂತ್ರಸ್ತರಿಗೆ ಸಹಾಯ ಮಾಡಿ

ಸಹಾಯ ಮಾಡಲಿಚ್ಛಿಸುವವರು ಕೇರಳ ಮುಖ್ಯಮಂತ್ರಿಯವರ ನೆರೆ ಪರಿಹಾರ ನಿಧಿಗೆಹಣಕಳುಹಿಸಬಹುದು

Chief Minister's Distress Relief Fund

NO: 67319948232
Bank: State Bank of India
IFSC : SBIN0070028
SWIFT CODE : SBININBBT08

ಇವನ್ನು ಓದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.