ADVERTISEMENT

ವಯನಾಡ್ ಪುತ್ತುಮಲೆಯಲ್ಲಿ 9 ಮೃತದೇಹ ಪತ್ತೆ, 15 ಮಂದಿ ನಾಪತ್ತೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2019, 12:07 IST
Last Updated 9 ಆಗಸ್ಟ್ 2019, 12:07 IST
ಕೃಪೆ: CMO Kerala  ಟ್ವಿಟರ್ ಖಾತೆ
ಕೃಪೆ: CMO Kerala ಟ್ವಿಟರ್ ಖಾತೆ   

ವಯನಾಡ್: ಕೇರಳದ ವಯನಾಡ್ ಜಿಲ್ಲೆ ಪ್ರವಾಹ ಮತ್ತು ಭೂಕುಸಿತದಿಂದ ತತ್ತರಿಸಿದೆ. ಇಲ್ಲಿನ ಮೇಪ್ಪಾಡಿಯಲ್ಲಿ ಭೂಕುಸಿತ ಉಂಟಾಗಿ ಹಲವಾರು ಪ್ರದೇಶಗಳು ನೀರಿನಲ್ಲಿ ಕೊಚ್ಚಿ ಹೋಗಿವೆ.ಪುತ್ತುಮಲೆಯಲ್ಲಿ ಭೂಕುಸಿತವುಂಟಾಗಿದ್ದು 9 ಮೃತದೇಹವನ್ನು ಪತ್ತೆ ಹಚ್ಚಲಾಗಿದೆ.ಇಬ್ಬರ ಗುರುತು ಪತ್ತೆಯಾಗಿದೆ.

ಸುಮಾರು40ರಷ್ಟು ಮನೆಗಳು ಕುಸಿದು, ಪ್ರವಾಹದಲ್ಲಿ ಕೊಚ್ಚಿ ಹೋಗಿವೆ. ಭೂಕುಸಿತವುಂಟಾದ ಪ್ರದೇಶಗಳಲ್ಲಿ15 ಮಂದಿ ನಾಪತ್ತೆಯಾಗಿದ್ದಾರೆ ಎಂದು ಮಲಯಾಳ ಮನೋರಮಾ ವರದಿ ಮಾಡಿದೆ.

ಮನೆ, ಕಟ್ಟಡ ಮತ್ತು ವಾಹನಗಳು ಮಣ್ಣಿನಡಿಯಲ್ಲಿ ಹೂತು ಹೋಗಿವೆ. ಬುಧವಾರ ರಾತ್ರಿ ಸಣ್ಣ ಪ್ರಮಾಣದಲ್ಲಿ ಭೂಮಿ ಕುಸಿತವುಂಟಾಗಿದ್ದರಿಂದ ಗುರುವಾರ ಬೆಳಗ್ಗೆ ಅಲ್ಲಿನ ಸ್ಥಳೀಯರನ್ನು ಸುರಕ್ಷಿತ ಕೇಂದ್ರಗಳಿಗೆ ಕರೆದೊಯ್ಯಲಾಗಿತ್ತು. ಹಾಗಾಗಿ ಹೆಚ್ಚಿನ ಜನರು ಆಪತ್ತಿನಿಂದ ಪಾರಾಗಿದ್ದಾರೆ.

ADVERTISEMENT

ಇಲ್ಲಿನ ನಿವಾಸಿಗಳಾದ ಲಾರೆನ್ಸ್ ಎಂಬವರ ಪತ್ನಿ ಕಮಲ, ಚಂದ್ರ ಎಂಬವರ ಪತ್ನಿ ಅಜಿತ, ಪನೀರ್‌ ಸೆಲ್ವಂ, ಪತ್ನಿ ರಾಣಿ ಎಂಬವರು ನಾಪತ್ತೆಯಾಗಿದ್ದಾರೆ.ಎಸ್ಟೇಟ್ ಬಳಿ ಕ್ಯಾಂಟೀನ್ ನಡೆಸುತ್ತಿರುವ ಶೌಕತ್ ಎಂಬವರ ಒಂದೂವರೆ ವಯಸ್ಸಿನ ಮಗುವಿನ ಮೃತದೇಹ ಪತ್ತೆಯಾಗಿದೆ.ಶೌಕತ್ ಮತ್ತು ಪತ್ನಿ ಆಸ್ಪತ್ರೆಯಲ್ಲಿದ್ದಾರೆ.

ಪುತ್ತುಮಲೆ ಬಸ್ ನಿಲ್ದಾಣದ ಬಳಿ ವಾಸವಿರುವ ಕೆಎಸ್‌ಆರ್‌ಟಿಸಿ ಚಾಲಕ ನೌಷಾದ್‌ರ ಪತ್ನಿ ಹಾಜಿರಾ ಅವರ ಮೃತದೇಹ ಸಿಕ್ಕಿದೆ.
ಕಾರ್ಮಿಕರನ್ನು ಸಂತ್ರಸ್ತರಶಿಬಿರಕ್ಕೆ ತಲುಪಿಸಿ ಮರಳುತ್ತಿದ್ದ ಅವರಾನ್ , ಅಬೂಬಕ್ಕರ್ ಎಂಬವರು ನಾಪತ್ತೆಯಾಗಿದ್ದಾರೆ. ಇವರು ಸಂಚರಿಸುತ್ತಿದ್ದ ಕಾರು ಮಳೆ ನೀರಲ್ಲಿ ಕೊಚ್ಚಿ ಹೋಗುತ್ತಿರುವುದನ್ನು ನೋಡಿದ್ದೇವೆ ಎಂದು ಸ್ಥಳೀಯರು ಹೇಳಿದ್ದಾರೆ.

ಇದನ್ನೂ ಓದಿ:

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.