ನವದೆಹಲಿ: ವಿಧಾನಸಭೆ ಒಪ್ಪಿಗೆ ನೀಡಿದ ಮಸೂದೆಗಳಿಗೆ ಅನುಮೋದನೆ ನೀಡಲು ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ವಿಳಂಬ ಮಾಡುತ್ತಿದ್ದಾರೆ. ಆ ಮೂಲಕ ಜನರ ಹಕ್ಕಿಗೆ ಭಂಗ ಉಂಟು ಮಾಡುತ್ತಿದ್ದಾರೆ ಎಂದು ಕೇರಳ ಸರ್ಕಾರವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ರಾಜ್ಯ ವಿಧಾನಸಭೆಯಲ್ಲಿ ಒಪ್ಪಿಗೆ ನೀಡಲಾದ 8 ಮಸೂದೆಗಳಿಗೆ ರಾಜ್ಯಪಾಲರು ಒಪ್ಪಿಗೆ ನೀಡಿಲ್ಲ. ಇದರಲ್ಲಿ ಹಲವು ಮಸೂದೆಗಳು ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ್ದಾಗಿವೆ. ರಾಜ್ಯಪಾಲರ ವಿಳಂಬದಿಂದಾಗಿ ರಾಜ್ಯದ ಅವಕಾಶ ವಂಚಿತ ಜನರಿಗೆ ಕಲ್ಯಾಣ ಯೋಜನೆಗಳ ಲಾಭ ನಿರಾಕರಣೆಯಾಗುತ್ತಿವೆ ಎಂದು ಕೇರಳ ಸರ್ಕಾರ ಹೇಳಿದೆ.
ಮೂರು ಮಸೂದೆಗಳು 2 ವರ್ಷದಿಂದ, ಮೂರು ಮಸೂದೆಗಳು ಒಂದು ವರ್ಷಕ್ಕೂ ಅಧಿಕ ಸಮಯದಿಂದ ರಾಜ್ಯಪಾಲರ ಬಳಿ ಬಾಕಿ ಉಳಿದಿದೆ. ಇದು ಸಂವಿಧಾನದ ಮೂಲ ಆಶಯಗಳಿಗೆ ವಿರುದ್ಧವಾದುದು ಎಂದು ಕೇರಳ ಸರ್ಕಾರ ಹೇಳಿದೆ.
ತುಂಬಾ ಸಮಯದವರೆಗೆ ಮಸೂದೆಗಳಿಗೆ ಅಂಕಿತ ಹಾಕದೆ ಇರುವುದು ಸಂವಿಧಾನದ 14ನೇ ಪರಿಚ್ಚೇದದ ಉಲ್ಲಂಘನೆ. ಕಲ್ಯಾಣ ಯೋಜನೆಗಳ ಲಾಭ ಪಡೆಯುವ ಸಂವಿಧಾನದ 21ನೇ ಪರಿಚ್ಛೇದದಡಿ ಜನರಿಗೆ ಇರುವ ಹಕ್ಕಿನ ನಿರಾಕರಣೆ ಎಂದು ಅರ್ಜಿಯಲ್ಲಿ ಕೇರಳ ಸರ್ಕಾರ ಹೇಳಿದೆ.
ಈ ಹಿಂದೆ ತಮಿಳುನಾಡು ಹಾಗೂ ಪಂಜಾಬ್ ಸರ್ಕಾರಗಳು ಕೂಡ ಇದೇ ರೀತಿ ರಾಜ್ಯಪಾಲರ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.