ADVERTISEMENT

ನನ್ನ ಮೇಲಿನ ಹಲ್ಲೆಗೆ ಸಿಎಂ ಪಿಣರಾಯಿ ವಿಜಯನ್ ಪಿತೂರಿ: ಕೇರಳ ರಾಜ್ಯಪಾಲ ಆರೋಪ

ಏಜೆನ್ಸೀಸ್
Published 12 ಡಿಸೆಂಬರ್ 2023, 5:51 IST
Last Updated 12 ಡಿಸೆಂಬರ್ 2023, 5:51 IST
<div class="paragraphs"><p>ಕೇರಳ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌ ಹಾಗೂ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ </p></div>

ಕೇರಳ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌ ಹಾಗೂ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌

   

ಪಿಟಿಐ ಚಿತ್ರ

ತಿರುವನಂತಪುರಂ: 'ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ನನ್ನ ಮೇಲಿನ ಹಲ್ಲೆಗೆ ಪಿತೂರಿ ನಡೆಸಿದ್ದಾರೆ' ಎಂದು ಕೇರಳ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌ ಆರೋಪಿಸಿದ್ದಾರೆ.

ADVERTISEMENT

ದೆಹಲಿಗೆ ತೆರಳುವ ಸಲುವಾಗಿ ವಿಮಾನ ನಿಲ್ದಾಣದತ್ತ ಹೊರಟಿದ್ದ ಆರಿಫ್‌ ಅವರ ವಾಹನವನ್ನು ಸಿಪಿಐ(ಎಂ) ಪಕ್ಷದ ವಿದ್ಯಾರ್ಥಿ ಘಟಕವಾದ 'ಎಸ್‌ಎಫ್‌ಐ' ಕಾರ್ಯಕರ್ತರು ತಡೆದು, ಕಪ್ಪು ಬಾವುಟ ಪ್ರದರ್ಶಿಸಿದ್ದರು. ಇದರ ಬೆನ್ನಲ್ಲೇ ಆರಿಫ್‌ ಅವರು ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಮುಖ್ಯಮಂತ್ರಿ ಕಾರ್ಯಕ್ರಮ ನಡೆಯುತ್ತಿದ್ದರೆ, ಪ್ರತಿಭಟನಾಕಾರರ ಕಾರುಗಳು ಅತ್ತ ಸಾಗಲು ಪೊಲೀಸರು ಅನುಮತಿ ನೀಡುತ್ತಿದ್ದರೇ? ಮುಖ್ಯಮಂತ್ರಿಯ ಕಾರಿನ ಸಮೀಪಕ್ಕೆ ಯಾರಾದರು ಬರಲು ಬಿಡುತ್ತಿದ್ದರೇ?' ಎಂದು ಪ್ರಶ್ನಿಸಿದ್ದಾರೆ.

ಪ್ರತಿಭಟನಾಕಾರರು ಕಪ್ಪು ಬಾವುಟ ಪ್ರದರ್ಶಿಸಿದ್ದು ಮಾತ್ರವಲ್ಲ. ತಮ್ಮ ಕಾರಿಗೆ ಗುದ್ದಿದ್ದಾರೆ. ಮುಖ್ಯಮಂತ್ರಿಯವರ ನಿರ್ದೇಶನದಂತೆ ಈ ದಾಳಿ ನಡೆದಿದೆ. ಇಂತಹ ರೌಡಿಗಳು, ಕ್ರಿಮಿನಲ್‌ಗಳ ವಿರುದ್ಧ ಕ್ರಮ ಕೈಗೊಳ್ಳದಂತೆ ಪೊಲೀಸರನ್ನು ನಿಯಂತ್ರಣದಲ್ಲಿ ಇಡಲಾಗಿದೆ ಎಂದೂ ಬೇಸರ ವ್ಯಕ್ತಪಡಿಸಿದ್ದಾರೆ.

ಪಿಣರಾಯಿ ವಿಜಯನ್ ಮತ್ತು ಕಮ್ಯುನಿಸ್ಟ್ ಪಕ್ಷದ ಕಾರ್ಯದರ್ಶಿ ರಾಜ್ಯಪಾಲರಿಗೆ ಬೆದರಿಕೆ ಹಾಕಿದ್ದಾರೆ ಎಂದು ಕೇಂದ್ರ ಸಚಿವ ವಿ. ಮುರಳೀಧರನ್ ಆರೋಪಿಸಿದ್ದಾರೆ.

'ತಿರುವನಂತಪುರದಲ್ಲಿ ಕೇರಳ ರಾಜ್ಯಪಾಲರ ಮೇಲೆ ನಿನ್ನೆ (ಸೋಮವಾರ) ನಡೆದ ದಾಳಿ ಪ್ರಕರಣವು ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆಯ ಸ್ಥಿತಿಯನ್ನು ಬಿಂಬಿಸುತ್ತದೆ. ರಾಜಭವನದಿಂದ ಕೇವಲ 5 ಕಿ.ಮೀ ದೂರದಲ್ಲಿರುವ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವ ಮಾರ್ಗದಲ್ಲಿ ಅವರ ಮೇಲೆ ಮೂರು ಬಾರಿ ದಾಳಿ ನಡೆದಿದೆ. ದಾಳಿಕೋರರಿಗೆ ಸರ್ಕಾರವೇ ಕುಮ್ಮಕ್ಕು ನೀಡಿದೆ. ಅಂತಹವರಿಗೆ ಅನುಕೂಲವಾಗುವಂತೆ ಪೊಲೀಸರೂ ನಡೆದುಕೊಂಡಿದ್ದಾರೆ' ಎಂದು ಮುರಳೀಧರನ್ ಕಿಡಿಕಾರಿದ್ದಾರೆ.

ಎಸ್‌ಎಫ್‌ಐ ಕಾರ್ಯಕರ್ತರು ರಾಜ್ಯಪಾಲರ ವಾಹನವನ್ನು ಒಂದು ಕಡೆ ತಡೆದು ಕಪ್ಪು ಬಾವುಟ ಪ್ರದರ್ಶಿಸಿದ್ದಾರೆ. ಈ ಸಂಬಂಧ ಏಳು ಮಂದಿಯನ್ನು ಬಂಧಿಸಲಾಗಿದೆ. ಇನ್ನೆರಡು ಕಡೆ ವಾಹನ ತಡೆದಿಲ್ಲ. ಕಪ್ಪು ಬಾವುಟ ಮಾತ್ರ ಪ್ರದರ್ಶಿಸಿದ್ದಾರೆ. ಈ ಬಗ್ಗೆ 10–12 ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.