ತಿರುವನಂತಪುರ: ತಿರುವನಂತಪುರ: ವಿದ್ಯಾರ್ಥಿಯೊಬ್ಬರ ಸಾವಿನ ಪ್ರಕರಣ ಸಂಬಂಧ ವಯನಾಡಿನ ‘ಕೇರಳ ಪಶುವೈದ್ಯಕೀಯ ಮತ್ತು ಪ್ರಾಣಿ ವಿಜ್ಞಾನ ವಿಶ್ವವಿದ್ಯಾಲಯ’ದ ಕುಲಪತಿ ಪ್ರೊ. ಎಂ.ಆರ್. ಶಶೀಂದ್ರನ್ ಅವರನ್ನು ಕುಲಾಧಿಪತಿಯೂ ಆಗಿರುವ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಶನಿವಾರ ಅಮಾನತುಗೊಳಿಸಿದ್ದಾರೆ.
ಫೆಬ್ರುವರಿ 18ರಂದು ವಿದ್ಯಾರ್ಥಿ ಸಿದ್ಧಾರ್ಥನ್ ಅನುಮಾನಸ್ಪದವಾಗಿ ಮೃತಪಟ್ಟಿದ್ದ. ಈ ಕುರಿತು ಕುಲಪತಿ ಪ್ರೊ. ಎಂ.ಆರ್. ಶಶೀಂದ್ರನಾಥ್ ಸಲ್ಲಿಸಿದ ವರದಿಯು ಸಮರ್ಪಕವಾಗಿಲ್ಲ. ಜತೆಗೆ ತಮ್ಮ ಕರ್ತವ್ಯ ಮತ್ತು ಜವಾಬ್ದಾರಿಗಳ ಬಗ್ಗೆ ಅಸಡ್ಡೆ ಹಾಗೂ ನಿರ್ಲಕ್ಷ್ಯ ತೋರಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ರಾಜ್ಯಪಾಲ ಆರೀಫ್, ಇದು ಕರ್ತವ್ಯ ಲೋಪಕ್ಕೆ ಸಾಕ್ಷಿ ಎಂದು ತಮ್ಮ ಆದೇಶಪ್ರತಿಯಲ್ಲಿ ಹೇಳಿದ್ದಾರೆ
ಪ್ರಕರಣ ಸಂಬಂಧ ನ್ಯಾಯಮೂರ್ತಿಯೊಬ್ಬರಿಂದ ತನಿಖೆ ನಡೆಸಬೇಕು ಎಂದು ಸರ್ಕಾರಕ್ಕೆ ಸೂಚಿಸಿರುವ ರಾಜ್ಯಪಾಲರು, ಈ ಬಗ್ಗೆ ಕೇರಳ ಹೈಕೋರ್ಟ್‌ನ ರಿಜಿಸ್ಟ್ರಾರ್‌ಗೆ ಮನವಿ ಸಲ್ಲಿಸಬೇಕು ಎಂದು ಹೇಳಿದ್ದಾರೆ.
ಕೇರಳ ಪಶುವೈದ್ಯಕೀಯ ಮತ್ತು ಪ್ರಾಣಿ ವಿಜ್ಞಾನ ವಿಶ್ವವಿದ್ಯಾಲಯದ ಎರಡನೇ ವರ್ಷದ ವಿದ್ಯಾರ್ಥಿಯಾಗಿದ್ದ ಸಿದ್ದಾರ್ಥನ್ ಅವರ ಮೃತದೇಹ, ಹಾಸ್ಟೆಲ್‌ನ ಸ್ನಾನಗೃಹದಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಎಸ್‌ಎಫ್‌ಐ ಸಂಘಟನೆಗೆ ಸೇರಿದ ಕಾಲೇಜು ಸ್ನೇಹಿತರೇ, ಆತನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ಸಿದ್ದಾರ್ಥನ್ ಪೋಷಕರು ಆರೋಪಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.