ಕೊಲ್ಲಂ: ಕೇರಳದ ಕೊಲ್ಲಂ ಜಿಲ್ಲೆಯ ನಿಲಮೇಲ್‌ನಲ್ಲಿ ಶನಿವಾರ ನಾಟಕೀಯ ಬೆಳವಣಿಗೆಗಳು ನಡೆದವು. ಎಸ್‌ಎಫ್‌ಐ ಕಾರ್ಯಕರ್ತರ ಪ್ರತಿಭಟನೆಗೆ ಗುರಿಯಾದ ರಾಜ್ಯದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ತಮ್ಮ ಕಾರಿನಿಂದ ಇಳಿದು, ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೆ, ರಸ್ತೆ ಬದಿಯಲ್ಲಿ ಕುಳಿತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ವಿರುದ್ಧ ಹರಿಹಾಯ್ದರು. ವಿಜಯನ್ ಅವರು ‘ರಾಜ್ಯದಲ್ಲಿ ಅರಾಜಕತೆಗೆ ಇಂಬುಗೊಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಎಸ್‌ಎಫ್‌ಐ ಕಾರ್ಯಕರ್ತರು ‘ಗೂಂಡಾಗಳು’, ‘ದಿನಗೂಲಿಯವರು’ ಎಂದು ಖಾನ್ ಸಿಟ್ಟು ಹೊರಹಾಕಿದರು.
ಎಸ್‌ಎಫ್‌ಐ ಕಾರ್ಯಕರ್ತರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಕೋರಿದ ಖಾನ್, ನಂತರ ಅದಕ್ಕೆ ಸಂಬಂಧಿಸಿದ ಎಫ್‌ಐಆರ್ ಪ್ರತಿಯನ್ನು ತೋರಿಸಬೇಕು ಎಂದು ಪೊಲೀಸರನ್ನು ಒತ್ತಾಯಿಸಿದರು.
ತಾವು ಪ್ರತಿಭಟನೆ ನಡೆಸಿಲ್ಲ, ಎಫ್ಐಆರ್ ಪ್ರತಿಗಾಗಿ ಕಾಯುತ್ತಿರುವುದಾಗಿ ರಸ್ತೆ ಬದಿಯಲ್ಲಿ ಕುಳಿತಿದ್ದ ಖಾನ್ ಹೇಳಿದರು. 17 ಮಂದಿ ಎಸ್‌ಎಫ್‌ಐ ಕಾರ್ಯಕರ್ತರ ವಿರುದ್ಧ ದಾಖಲಿಸಲಾದ ಎಫ್‌ಐಆರ್‌ನ ಪ್ರತಿಯನ್ನು ಪೊಲೀಸರು ತೋರಿಸಿದ ನಂತರ ಖಾನ್ ಅವರು ಅಲ್ಲಿಂದ ತೆರಳಿದರು.
ಪ್ರತಿಭಟನೆಯಲ್ಲಿ ತೊಡಗಿದ್ದ ಎಸ್‌ಎಫ್‌ಐ ಕಾರ್ಯಕರ್ತರು ತಮ್ಮ ಕಾರಿಗೆ ಗುದ್ದಿದ್ದಾರೆ ಎಂದು ಖಾನ್ ಆರೋಪಿಸಿದರು.
ತಿರುವನಂತಪುರದಿಂದ ಕೊಟ್ಟಾರಕ್ಕರಕ್ಕೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ರಾಜ್ಯಪಾಲರು, ನೀಲಮೇಲ್ ಸನಿಹದಲ್ಲಿ ರಸ್ತೆ ಬದಿಯಲ್ಲಿ ಕಪ್ಪುಬಾವುಟ ಪ್ರದರ್ಶಿಸಿದ ಎಸ್‌ಎಫ್ಐ ಕಾರ್ಯಕರ್ತರನ್ನು ಗಮನಿಸಿದರು. ರಾಜ್ಯಪಾಲರನ್ನು ವಿರೋಧಿಸಿ ಈ ಕಾರ್ಯಕರ್ತರು, ‘ಸಂಘಿ ರಾಜ್ಯಪಾಲರೇ ವಾಪಸ್ ಹೋಗಿ’ ಎಂಬ ಬರಹ ಇದ್ದ ಭಿತ್ತಿಪತ್ರ ಹಿಡಿದಿದ್ದರು. ಇದರಿಂದ ಕುಪಿತಗೊಂಡ ಖಾನ್, ಕಾರಿನಿಂದ ಇಳಿದರು. ಎಸ್‌ಎಫ್‌ಐ ಕಾರ್ಯಕರ್ತರನ್ನು ಉದ್ದೇಶಿಸಿ ‘ಬನ್ನಿ’ ಎನ್ನುತ್ತ ಅವರೆಡೆ ಸಾಗಿದರು.
ಆಗ ಅಲ್ಲಿದ್ದ ಪೊಲೀಸ್ ಸಿಬ್ಬಂದಿ, ಖಾನ್ ಮತ್ತು ಎಸ್‌ಎಫ್‌ಐ ಕಾರ್ಯಕರ್ತರ ನಡುವೆ ಅಡ್ಡವಾಗಿ ನಿಂತರು. ಪೊಲೀಸರು ಪ್ರತಿಭಟನಕಾರರನ್ನು ಅಲ್ಲಿಂದ ಬೇರೆ ಕಳುಹಿಸಿದ ನಂತರ, ಹತ್ತಿರದ ಚಹಾ ಅಂಗಡಿಯೊಂದರಿಂದ ಕುರ್ಚಿ ತರಿಸಿಕೊಂಡು ಖಾನ್ ಅಲ್ಲಿಯೇ ಕುಳಿತರು. ಪ್ರತಿಭಟನೆ ನಡೆಸಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು.
ಪ್ರಯಾಣ ಮುಂದುವರಿಸುವಂತೆ ಅಲ್ಲಿದ್ದ ಅಧಿಕಾರಿಗಳು ಮನವಿ ಮಾಡಿದಾಗ, ‘ನಾನು ಹೋಗುವುದಿಲ್ಲ. ನೀವು (ಪೊಲೀಸರು) ಪ್ರತಿಭಟನಕಾರರಿಗೆ ರಕ್ಷಣೆ ನೀಡುತ್ತಿದ್ದೀರಿ’ ಎಂದು ಖಾನ್ ಹೇಳಿದರು. ‘ಪೊಲೀಸರೇ ಕಾನೂನು ಉಲ್ಲಂಘಿಸಿದರೆ ಕಾನೂನನ್ನು ಎತ್ತಿಹಿಡಿಯುವ ಕೆಲಸ ಯಾರು ಮಾಡುತ್ತಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಇದು ಪ್ರತಿಭಟನೆ ಅಲ್ಲ. ನಾನು ಯಾಕೆ ಪ್ರತಿಭಟನೆ ನಡೆಸಬೇಕು? ನಾನೇ ಕ್ರಮ ಕೈಗೊಳ್ಳಬಲ್ಲೆ. ಎಫ್‌ಐಆರ್ ಪ್ರತಿಯು ಬರಲೆಂದು ಕಾಯುತ್ತಿದ್ದೆ’ ಎಂದು ಖಾನ್ ಅವರು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರವಾಗಿ ಹೇಳಿದರು.
ರಾಜ್ಯಪಾಲರಿಗೆ ಝೆಡ್ ಪ್ಲಸ್ ಭದ್ರತೆ
ತಿರುವನಂತರಪುರ/ಕೊಲ್ಲಂ: ಆರಿಫ್ ಮೊಹಮ್ಮದ್ ಖಾನ್ ಅವರಿಗೆ ನೀಡಿದ್ದ ಭದ್ರತೆಯನ್ನು ಕೇಂದ್ರ ಸರ್ಕಾರವು ಝೆಡ್ ಪ್ಲಸ್ ಶ್ರೇಣಿಗೆ ಹೆಚ್ಚಿಸಿದೆ.
ನಿಲಮೇಲ್‌ನಲ್ಲಿನ ಬೆಳವಣಿಗೆಗಳ ಒಂದು ಗಂಟೆಯೊಳಗೆ ಕೇರಳ ರಾಜಭವನವು ಈ ವಿಷಯವನ್ನು ಪ್ರಕಟಿಸಿದೆ. ಕೇಂದ್ರ ಗೃಹ ಸಚಿವಾಲಯವು ಖಾನ್ ಅವರಿಗೆ ಸಿಆರ್‌ಪಿಎಫ್ ಸಿಬ್ಬಂದಿಯಿಂದ ರಕ್ಷಣೆ ಒದಗಿಸಲಿದೆ ಎಂದು ತಿಳಿಸಿದೆ.
ಕೇಂದ್ರ ವಿದೇಶಾಂಗ ವ್ಯವಹಾರಗಳ ಖಾತೆಯ ರಾಜ್ಯ ಸಚಿವ ವಿ. ಮುರಳೀಧರನ್ ಅವರು, ‘ಕೇರಳದ ಗೃಹ ಇಲಾಖೆ ಮತ್ತು ಅದರ ಮುಖ್ಯಸ್ಥರಾಗಿರುವ ಪಿಣರಾಯಿ ವಿಜಯನ್ ಅವರು ತಮ್ಮ ಸಾಂವಿಧಾನಿಕ ಹೊಣೆ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ ಎಂಬುದನ್ನು ಈ ಘಟನೆಯು ತೋರಿಸುತ್ತಿದೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.