ತಿರುವನಂತಪುರ:ಪೌರತ್ವ (ತಿದ್ದುಪಡಿ) ಕಾಯ್ದೆ ಅನುಷ್ಠಾನ ವಿರೋಧಿಸಿ ಕೇರಳದಲ್ಲಿ ಇಂದು ಹರತಾಳ (ಬಂದ್) ನಡೆಯುತ್ತಿದೆ.
ಎಸ್‌ಡಿಪಿಐ, ಬಿಎಸ್‌ಪಿ ಸೇರಿದಂತೆ ಹಲವು ರಾಜಕೀಯ ಪಕ್ಷಗಳನ್ನೊಳಗೊಂಡ ಜಂಟಿ ಕ್ರಿಯಾ ಸಮಿತಿ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಹರತಾಳಕ್ಕೆ ಕರೆ ನೀಡಿದೆ.ಸುಮಾರು 30 ಸಂಘಟನೆಗಳು ಇದರಲ್ಲಿ ಭಾಗಿಯಾಗಿವೆ. ಸಿಪಿಎಂ, ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ಹರತಾಳದಲ್ಲಿ ಭಾಗಿಯಾಗಿಲ್ಲ.
ಹರತಾಳಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿದ್ದು, ಇದು ದೇಶದ ಹಿತಾಸಕ್ತಿಗೆ ವಿರುದ್ಧದ ಕ್ರಮ ಎಂದಿದೆ. ಅಲ್ಲದೆ, ರಾಜಕೀಯ ಲಾಭಕ್ಕಾಗಿ ನಡೆಸುತ್ತಿರುವ ಪ್ರತಿಭಟನೆ ಎಂದು ಟೀಕಿಸಿದೆ.
ಹರತಾಳದ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ರಾಜ್ಯ ರಾಜಧಾನಿ ತಿರುವನಂತಪುರದಲ್ಲಿ ಅಂಗಡಿ ಮುಂಗಟ್ಟುಗಳು ಮುಚ್ಚಿವೆ. ಕೊಚ್ಚಿಯಲ್ಲಿ ಮೆಟ್ರೊ ರೈಲು ಮತ್ತು ಬಸ್ ಸಂಚಾರ ಎಂದಿನಂತೆಯೇ ನಡೆಯುತ್ತಿದೆ. ಕೇರಳ–ತಮಿಳುನಾಡು ಗಡಿ ಪ್ರದೇಶವಾದ ವಲಯಾರ್ ಎಂಬಲ್ಲಿ ತಮಿಳುನಾಡು ಸಾರಿಗೆ ಸಂಸ್ಥೆಯ ಬಸ್ಸೊಂದರ ಮೇಲೆ ಮತ್ತು ಅಲುವಾದಲ್ಲಿ ಕೇರಳಸಾರಿಗೆ ಸಂಸ್ಥೆಯ ಬಸ್ಸೊಂದರ ಮೇಲೆ ಕಲ್ಲುತೂರಾಟ ನಡೆದಿದೆ. ಬಸ್ಸಿನ ಗಾಜುಗಳು ಪುಡಿಯಾಗಿವೆ. ಅದೃಷ್ಟವಶಾತ್ ಸಾವು–ನೋವು ಸಂಭವಿಸಿಲ್ಲ. ಕೋಯಿಕ್ಕೋಡ್‌ನಲ್ಲಿಕೇರಳ ಸಾರಿಗೆ ಸಂಸ್ಥೆಯ ಬಸ್ ಸಂಚಾರ ಸ್ಥಗಿತಗೊಂಡಿದೆ.
ಹಲವೆಡೆಅಹಿತಕರ ಘಟನೆ:ಹಲವೆಡೆ ಕಲ್ಲುತೂರಾಟ, ಬಲವಂತದಿಂದ ಬಂದ್ ಮಾಡಿಸಿರುವುದು ನಡೆದಿದೆ. ತಿರೂರ್‌ನಲ್ಲಿ ಪ್ರತಿಭಟನಾಕಾರರು ಬಸ್ ಸಂಚಾರಕ್ಕೆ ತಡೆಯೊಡ್ಡಿದ್ದಾರೆ. ಕಣ್ಣೂರಿನಲ್ಲಿ ರಸ್ತೆ ತಡೆ ನಡೆಸಲು ಮುಂದಾದ 30 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಾಲಕ್ಕಾಡ್‌ನಲ್ಲಿ 25 ಮಂದಿಯನ್ನುಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.