ತಿರುವನಂತಪುರ: ರಾಜ್ಯದಲ್ಲಿ ದಿಢೀರ್ ಹರತಾಳ ನಡೆಸುವುದನ್ನು ನಿಷೇಧಿಸಿ ಕೇರಳ ಹೈಕೋರ್ಟ್ ಸೋಮವಾರ ಆದೇಶ ಹೊರಡಿಸಿದೆ.
ಇನ್ನುಮುಂದೆ ಯಾವುದೇ ಸಂಘಟನೆಗಳು ಮತ್ತು ಪಕ್ಷಗಳು ಹರತಾಳಕ್ಕೆ ದಿಢೀರ್ ಕರೆ ನೀಡುವಂತಿಲ್ಲ. ಒಂದು ವೇಳೆ ಹರತಾಳ ನಡೆಸುವುದಾದರೆ ಕನಿಷ್ಠ ಏಳು ದಿನಗಳ ಮುಂಚಿತವಾಗಿ ಸಾರ್ವಜನಿಕರ ಗಮನಕ್ಕೆ ತರಬೇಕು ಎಂದು ಆದೇಶದಲ್ಲಿ ಹೇಳಿದೆ.
ಶಬರಿಮಲೆ ದೇಗುಲವನ್ನು ಮಹಿಳೆಯರು ಪ್ರವೇಶಿಸಿದ್ದ ಕಾರಣಕ್ಕೆ ಸರಣಿ ಹರತಾಳಕ್ಕೆ ಸಾಕ್ಷಿಯಾಗಿದ್ದ ಕೇರಳ ರಾಜ್ಯವು ಹೈಕೋರ್ಟ್ ಆದೇಶದಿಂದ ನಿರಾಳಗೊಂಡಿದೆ. 2018ರಲ್ಲಿ ನಡೆದ ದಿಢೀರ್ ಹರತಾಳಗಳಿಂದ 97 ಕೆಲಸದ ದಿನಗಳು ನಷ್ಟವಾಗಿವೆ. ಕೈಗಾರಿಕೆ ಮತ್ತು ವಾಣಿಜ್ಯ ಉದ್ಯಮ ಇದರಿಂದ ಸಾಕಷ್ಟು ನಷ್ಟ ಅನುಭವಿಸಿವೆ. ಹಾಗಾಗಿ ರಾಜ್ಯದಲ್ಲಿ ದಿಢೀರ್ ಹರತಾಳ ನಿಷೇಧಿಸಬೇಕು ಎಂದು ಕೇರಳದ ವಾಣಿಜ್ಯ ಮಂಡಳಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕೋರ್ಟ್ ಪರಿಗಣಿಸಿದ್ದು, ಈ ಆದೇಶ ಹೊರಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.