ಕೊಚ್ಚಿ: ದೂರವಾಗಿದ್ದ ತಂದೆ ಮತ್ತು ತಾಯಿ ನಡುವೆ, ಮಗುವಿಗೆ ಹೆಸರಿಡುವ ವಿಚಾರದಲ್ಲಿ ಒಮ್ಮತ ಮೂಡದ ಕಾರಣ ಮೂರು ವರ್ಷದ ಹೆಣ್ಣು ಮಗುವಿಗೆ ಕೇರಳ ಹೈಕೋರ್ಟ್ ಸ್ವತಃ ನಾಮಕಾರಣ ಮಾಡಿದೆ.
ಈ ಸಂಬಂಧ ಕಳೆದ ತಿಂಗಳು ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಬೇಚು ಕುರಿಯನ್ ಥಾಮಸ್, ‘ಸದ್ಯಕ್ಕೆ ತಾಯಿಯ ಆರೈಕೆಯಲ್ಲಿರುವ ಮಗುವಿಗೆ ಆಕೆಯ ತಾಯಿ ನೀಡುವ ಹೆಸರಿಗೆ ಮಹತ್ವ ನೀಡಲಾಗುತ್ತದೆ. ಇದೇ ವೇಳೆ ಪಿತೃತ್ವದ ಕುರಿತು ಯಾವುದೇ ವಿವಾದ ಹುಟ್ಟಿಕೊಳ್ಳದಂತೆ ನೋಡಿಕೊಳ್ಳಲು ತಂದೆ ನೀಡುವ ಹೆಸರನ್ನು ಪರಿಗಣಿಸಲಾಗುತ್ತದೆ’ ಎಂದು ಆದೇಶಿಸಿದ್ದರು.
ಪ್ರಕರಣವೇನು?
2020ರ ಫೆಬ್ರುವರಿ 12ರಂದು ಮಗುವಿನ ಜನನವಾಗಿತ್ತು. ಈ ವೇಳೆ ಮಗುವಿನ ತಂದೆ ಮತ್ತು ತಾಯಿ ಸಂಬಂಧದಲ್ಲಿ ಒಡಕು ಉಂಟಾಗಿತ್ತು.
ತಮ್ಮ ಮಗುವಿಗೆ ಹೆಸರಿಡುವ ವಿಚಾರವು ದಂಪತಿ ಮಧ್ಯೆ ವೈಮನಸ್ಸಿಗೆ ಕಾರಣವಾಗಿತ್ತು. ಇದರಿಂದಾಗಿ ಮಗುವಿನ ಜನನ ಪ್ರಮಾಣಪತ್ರದಲ್ಲಿ ಹೆಸರು ಉಲ್ಲೇಖವಿರಲಿಲ್ಲ. ಮಗುವಿನ ಹೆಸರು ನೋಂದಣಿಗೆ ಆಕೆಯ ತಾಯಿ ಯತ್ನಿಸಿದ್ದರು. ಆದರೆ, ಜನನ ಮತ್ತು ಮರಣ ನೋಂದಣಾಧಿಕಾರಿ ಮಗುವಿನ ಹೆಸರು ನೋಂದಣಿಗೆ ತಂದೆ ಮತ್ತು ತಾಯಿ ಇಬ್ಬರೂ ಹಾಜರಿರಬೇಕು ಎಂದು ಹೇಳಿದ್ದರು.
ಹೀಗಾಗಿ ಮಗುವಿನ ತಾಯಿ ಹೈಕೋರ್ಟ್ ಮೊರೆ ಹೋಗಿದ್ದರು. ಸೆಪ್ಟೆಂಬರ್ ಐದರಂದು ವಿಚಾರಣೆ ನಡೆಸಿದ್ದ ನ್ಯಾಯಾಲಯ, ಮಗುವಿನ ಹೆಸರಿನ ವಿಚಾರದಲ್ಲಿ ಮಗುವಿನ ಕ್ಷೇಮವೇ ಮುಖ್ಯವಾಗಿರಬೇಕೇ ಹೊರತು ಪೋಷಕರ ಹಕ್ಕು ಮುಖ್ಯವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.