ತಿರುವನಂತಪುರ: ಕೇರಳದಲ್ಲಿ ಕೊರೊನಾ ವೈರಾಣುವಿನ ಜೆಎನ್.1 ಉಪತಳಿ ಪತ್ತೆಯಾಗಿದ್ದು, ಜನರು ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.
‘ಕೊರೊನಾ ವೈರಾಣುವಿನ ಜೆಎನ್.1 ಉಪತಳಿ. ಎರಡು ಅಥವಾ ಮೂರು ತಿಂಗಳ ಹಿಂದೆ ಸಿಂಗಾಪುರ ವಿಮಾನ ನಿಲ್ದಾಣದಲ್ಲಿ ನಡೆಸಿದ ಪರೀಕ್ಷೆಯಲ್ಲಿ ಭಾರತೀಯರೊಬ್ಬರಲ್ಲಿ ಈ ವೈರಾಣು ಪತ್ತೆಯಾಗಿತ್ತು. ಇದು ಭಾರತದ ಇತರೆ ಭಾಗಗಳಲ್ಲಿಯೂ ಕಂಡುಬಂದಿದೆ. ಕೇರಳದಲ್ಲೂ ಪತ್ತೆ ಮಾಡಲಾಗಿದೆ. ಕೇರಳದ ಆರೋಗ್ಯ ವ್ಯವಸ್ಥೆಯು ಬಹಳ ಉತ್ತಮವಾಗಿದೆ, ನಾವು ಅದನ್ನು ಜೀನೋಮಿಕ್ ಸೀಕ್ವೆನ್ಸಿಂಗ್ ಮೂಲಕ ಕಂಡುಹಿಡಿಯಬಹುದು. ಹಾಗಾಗಿ, ಯಾರೂ ಚಿಂತಿಸಬೇಕಾಗಿಲ್ಲ. ನಾವು ಪರಿಸ್ಥಿತಿಯನ್ನು ತೀವ್ರವಾಗಿ ಅವಲೋಕಿಸುತ್ತಿದ್ದೇವೆ. ಆದರೆ, ಜನರು ಜಾಗರೂಕರಾಗಿರಬೇಕು. ಕೊಮೊರ್ಬಿಡಿಟಿ ರೋಗಿಗಳು ಮತ್ತಷ್ಟು ಎಚ್ಚರ ವಹಿಸುವುದು ಸೂಕ್ತ’ ಎಂದು ಅವರು ಹೇಳಿದ್ದಾರೆ.
ಕೇರಳದ ಮಹಿಳೆಯೊಬ್ಬರಲ್ಲಿ ಇದೇ ತಿಂಗಳ 8ರಂದು ಕೊರೊನಾ ವೈರಾಣುವಿನ ಜೆಎನ್.1 ಉಪತಳಿಯು ಪತ್ತೆಯಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ (ಐಸಿಎಂಆರ್) ಶನಿವಾರ ಹೇಳಿತ್ತು.
ಶೀತ ಜ್ವರದ (ಐಎಲ್‌ಐ) ಸೌಮ್ಯ ಲಕ್ಷಣಗಳನ್ನು ಹೊಂದಿದ್ದ 73 ವರ್ಷದ ಮಹಿಳೆಯಲ್ಲಿನ ಮಾದರಿಯನ್ನು ತಿರುವನಂತಪುರ ಜಿಲ್ಲೆಯ ಕರಕುಳಂನಲ್ಲಿ ನವೆಂಬರ್ 18ರಂದು ಆರ್‌ಟಿ–ಪಿಸಿಆರ್ ಪರೀಕ್ಷೆಗೆ ಕಳುಹಿಸಲಾಗಿತ್ತು. ಜೆಎನ್.1 ವೈರಾಣು ಇರುವುದು ಪರೀಕ್ಷೆಯಿಂದ ದೃಢಪಟ್ಟಿದ್ದು, ಮಹಿಳೆ ಕೋವಿಡ್‌ನಿಂದ ಚೇತರಿಸಿಕೊಂಡಿದ್ದಾರೆ ಎಂದು ಐಸಿಎಂಆರ್ ಮಹಾನಿರ್ದೇಶಕ ಡಾ.ರಾಜೀವ್ ಬಹ್ಲ್ ಹೇಳಿದ್ದರು.
ಸದ್ಯ ದೇಶದಲ್ಲಿ ಕಾಣಿಸಿಕೊಳ್ಳುತ್ತಿರುವ ಕೋವಿಡ್-19 ಪ್ರಕರಣಗಳಲ್ಲಿ ಶೇ 90ಕ್ಕೂ ಹೆಚ್ಚು ಪ್ರಕರಣಗಳು ಸೌಮ್ಯ ಲಕ್ಷಣ ಹೊಂದಿವೆ. ರೋಗಿಗಳನ್ನು ಮನೆಯಲ್ಲೇ ಪ್ರತ್ಯೇಕವಾಗಿರಿಸಿ, ಆರೈಕೆ ಮಾಡಲಾಗುತ್ತಿದೆ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.