ಪಾಲಕ್ಕಾಡ್: ‘ತಾನು ಇಷ್ಟ ಪಟ್ಟು ವರಿಸಿದ ಪತಿಯನ್ನು ಮದುವೆಯಾದ 88 ದಿನಗಳಲ್ಲೇ ಹತ್ಯೆ ಮಾಡಿದ ತನ್ನ ತಂದೆ ಹಾಗೂ ಚಿಕ್ಕಪ್ಪನಿಗೆ ಇಲ್ಲಿನ ನ್ಯಾಯಾಲಯ ವಿಧಿಸಿರುವ ಜೀವಾವಧಿ ಶಿಕ್ಷೆ ತೀರಾ ಕಡಿಮೆಯಾಗಿದ್ದು, ಅವರಿಗೆ ಮರಣದಂಡನೆ ವಿಧಿಸಬೇಕು. ಇಲ್ಲವೇ ಜೀವಾವಧಿ ಶಿಕ್ಷೆಯ ಅವಧಿಯನ್ನು ದ್ವಿಗುಣಗೊಳಿಸಬೇಕು’ ಎಂದು ಪತಿಯನ್ನು ಕಳೆದುಕೊಂಡ ಯುವತಿ ಆಗ್ರಹಿಸಿದ್ದಾರೆ.
ಪಾಲಕ್ಕಾಡ್ ಜಿಲ್ಲೆಯ ತೇನಕುರುಸಿ ಎಂಬ ಪ್ರದೇಶದಲ್ಲಿ ನಾಲ್ಕು ವರ್ಷಗಳ ಹಿಂದೆ ಹರಿತಾ ಎಂಬ ಯುವತಿಯು ಅನ್ಯ ಜಾತಿಯ ಅನೀಶ್ ಎಂಬುವವರನ್ನು ವರಿಸಿದ್ದರು. ಆಸ್ತಿವಂತರೂ ಅಲ್ಲದ ಹಾಗೂ ಅನ್ಯ ಜಾತಿಗೆ ಸೇರಿದ ಯುವಕನನ್ನು ಮಗಳು ವರಿಸಿದ್ದು ಹರಿತಾ ಮನೆಯವರಿಗೆ ಇಷ್ಟವಿರಲಿಲ್ಲ. ಹೀಗಾಗಿ 2020ರ ಡಿ. 25ರಂದು ಹರಿತಾ ಅವರ ತಂದೆ ಪ್ರಭು ಕುಮಾರ್ ಹಾಗೂ ಚಿಕ್ಕಪ್ಪ ಸುರೇಶ್ ಸೇರಿಕೊಂಡು ಅನೀಶ್‌ನನ್ನು ಹತ್ಯೆಗೈದಿದ್ದರು.
ಹತ್ಯೆ ಕುರಿತು ಹರಿತಾ ಹಾಗೂ ಅನೀಶ್ ಅವರ ಪಾಲಕರು ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ಇದೊಂದು ಮರ್ಯಾದೆಗೇಡು ಹತ್ಯೆ ಎಂದು ಪರಿಗಣಿಸಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ನ್ಯಾಯಾಧೀಶ ಆರ್. ವಿನಾಯಕ ರಾವ್ ಅವರು ಶಿಕ್ಷೆಯ ಪ್ರಮಾಣವನ್ನು ಸೋಮವಾರ ಪ್ರಕಟಿಸಿದರು. ಶಿಕ್ಷೆಯೊಂದಿಗೆ ತಲಾ ₹50 ಸಾವಿರ ದಂಡ ವಿಧಿಸಿರುವ ನ್ಯಾಯಾಲಯವು, ಇದನ್ನು ಭರಿಸಲು ಅಪರಾಧಿಗಳು ವಿಫಲರಾದಲ್ಲಿ 2 ವರ್ಷಗಳ ಕಠಿಣ ಶಿಕ್ಷೆ ಎದುರಿಸಬೇಕು ಎಂದು ಆದೇಶವನ್ನು ಓದಿದರು.
ನ್ಯಾಯಾಲಯ ಪ್ರಕಟಿಸಿದ ಆದೇಶ ಕುರಿತು ಹರಿತಾ ಮತ್ತು ಅನೀಶ್ ಅವರ ಪಾಲಕರು ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಈ ಕುರಿತು ಹೈಕೋರ್ಟ್ ಮೆಟ್ಟಿಲೇರುವುದಾಗಿ ತಿಳಿಸಿದ್ದಾರೆ.
‘ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆಯಾಗುತ್ತದೆ ಅಥವಾ ದ್ವಿಗುಣ ಜೀವಾವಧಿ ಶಿಕ್ಷೆ ವಿಧಿಸುತ್ತಾರೆ ಎಂದು ನಂಬಿದ್ದೆವು. ಇವರು ಎಸಗಿರುವ ಕೃತ್ಯಕ್ಕೆ ಈಗ ಪ್ರಕಟಿಸಿರುವ ಶಿಕ್ಷೆ ತೀರಾ ಕಡಿಮೆ’ ಎಂದು ಗದ್ಗದಿತರಾದ ಹರಿತಾ ವರದಿಗಾರರಿಗೆ ಹೇಳಿದರು.
‘ಪ್ರಕರಣ ವಿಚಾರಣೆ ಹಂತದಲ್ಲಿರುವಾಗಲೇ ನನಗೆ ನನ್ನ ಕುಟುಂಬದಿಂದ ಜೀವಬೆದರಿಕೆ ಬಂದಿದೆ. ಜತೆಗೆ ಅನೀಶ್ ಅವರ ಪಾಲಕರಿಗೂ ಬಂದಿದೆ. ಈ ಕುರಿತು ರಕ್ಷಣೆ ನೀಡುವಂತೆ ಸರ್ಕಾರವನ್ನು ಕೋರಲಾಗಿದೆ’ ಎಂದಿದ್ದಾರೆ.
‘ಅಪರಾಧ ಎಸಗಿದವರಿಗೆ ಈಗಲೂ ತಮ್ಮ ಕೃತ್ಯದ ಕುರಿತು ಪಶ್ಚಾತ್ತಾಪವಿಲ್ಲ. ಅವರು ನಮ್ಮ ಮಗನನ್ನು ಅತ್ಯಂತ ಕ್ರೂರವಾಗಿ ಕೊಂದರು. ಅವರಿಗೆ ಉಗ್ರ ಶಿಕ್ಷೆಯಾಗಬೇಕು. ಅದಕ್ಕಾಗಿ ಯಾವುದೇ ಹಂತಕ್ಕಾದರೂ ನಾವು ಹೋಗಲು ಸಿದ್ಧ’ ಎಂದು ಅನೀಶ್ ತಂದೆ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.