ಎರ್ನಾಕುಲಂ: ಬಲಿಯಾದ ಮಹಿಳೆಯರ ಮಾಂಸವನ್ನು, ಮಾನವರ ಮಾಂಸ ಭಕ್ಷಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಬಹುದು ಎಂದು ಕೇರಳ ನರಬಲಿ ಪ್ರಕರಣದ ಮೊದಲ ಆರೋಪಿ ಮೊಹಮ್ಮದ್ ಶಫಿ, ಎರಡನೇ ಆರೋಪಿ ಭಗವಲ್ ಸಿಂಗ್ ಮತ್ತು ಆತನ ಪತ್ನಿ ಲೈಲಾಗೆ ತಲೆಕೆಡಿಸಿದ್ದ ಎಂಬ ಸಂಗತಿ ಈಗ ಬಯಲಾಗಿದೆ.
‘ಕ್ಷುದ್ರ ಪೂಜೆ ಮಾಡುವ ಕೆಲವರು ಮಾನವರ ಮಾಂಸ ಭಕ್ಷಿಸುತ್ತಾರೆ. ಅದಕ್ಕೆ ಹೆಚ್ಚಿನ ಬೇಡಿಕೆಯಿದೆ. ಬಲಿಯಾದ ಮಹಿಳೆಯರ 10 ಕೆ.ಜಿ ಮಾಂಸವನ್ನು ಫ್ರೀಜರ್‌ನಲ್ಲಿ ಸಂಗ್ರಹಿಸಿಡಬೇಕು. ಅದರ ಖರೀದಿದಾರರು ಮನೆಗೆ ಬರುತ್ತಾರೆ ಎಂದು ಆರೋಪಿ ಶಫಿ ಇನ್ನಿತರ ಆರೋಪಿಗಳಿಗೆ ಹೇಳಿದ್ದ’ ಎಂದು ತನಿಖಾ ತಂಡದ ಮೂಲಗಳು ಮಾಹಿತಿ ನೀಡಿವೆ.
ಬಲಿಯಾದವರ ಮಾಂಸ ಮಾರಾಟದಿಂದ ₹20 ಲಕ್ಷ ಗಳಿಸಬಹುದು ಎಂದು ಶಫಿ, ಭಗವಲ್ ಮತ್ತು ಲೈಲಾಗೆ ಹೇಳಿದ್ದಾಗಿ ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಭಗವಲ್ ಮತ್ತು ಲೈಲಾ ದಂಪತಿಯಿಂದ ಶಫಿ ಸುಮಾರು 6 ಲಕ್ಷ ರೂಪಾಯಿ ಸಾಲ ಪಡೆದಿದ್ದ. ಹಣ ಹಿಂದಿರುಗಿಸುವಂತೆ ದಂಪತಿ ಶಫಿ ಮೇಲೆ ಒತ್ತಡ ಹೇರಿದಾಗ, ಆತ ಸಂಪತ್ತಿನ ಆಸೆ ತೋರಿಸಿ ನರಬಲಿ ನೀಡುವ ಸಲಹೆ ನೀಡಿದ್ದ ಎನ್ನಲಾಗಿದೆ.
ಕೇರಳದ ಪತ್ತನಂತಿಟ್ಟ ಜಿಲ್ಲೆಯ ಎಳಂತೂರಿನಲ್ಲಿ ರೋಸ್ಲಿನ್ ಮತ್ತು ಪದ್ಮಾ ಎಂಬ ಮಹಿಳೆಯರನ್ನು ನರಬಲಿಗಾಗಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.
ಈ ಸುದ್ದಿ ಅಕ್ಟೋಬರ್ 11 ರಂದು ಬಹಿರಂಗವಾಗಿತ್ತು. ತಮಿಳು ಮಹಿಳೆ ಪದ್ಮಾ ನಾಪತ್ತೆ ಪ್ರಕರಣದ ತನಿಖೆ ವೇಳೆ ನರಬಲಿ ಬಯಲಾಗಿತ್ತು. ಪದ್ಮಾ ಸೆಪ್ಟೆಂಬರ್ 26 ರಿಂದ ಕಾಣೆಯಾಗಿರುವುದಾಗಿ ಆಕೆಯ ಸಹೋದರಿ ಪಳನಿಯಮ್ಮಾಳ್ ಅವರು ದೂರು ನೀಡಿದ್ದರು.
ಮಹಿಳೆ ಶಫಿಯೊಂದಿಗೆ ಸಂಪರ್ಕದಲ್ಲಿದ್ದರು ಎಂಬುದು ಎರ್ನಾಕುಲಂ ಪೊಲೀಸರ ತನಿಖೆಯ ವೇಳೆ ಗೊತ್ತಾಗಿತ್ತು.
ತನಿಖೆ ವೇಳೆ ಶಫಿ ನರಬಲಿ ಬಗ್ಗೆ ಬಾಯಿ ಬಿಟ್ಟಿದ್ದ. ಜೂನ್ 8 ರಂದು ಎಳಂತೂರಿನ ಮನೆಯಲ್ಲಿ ಇನ್ನೊಬ್ಬ ಮಹಿಳೆ ರೋಸ್ಲಿನ್ ಅವರನ್ನು ನರಬಲಿ ಹೆಸರಿನಲ್ಲಿ ಕೊಲೆ ಮಾಡಲಾಗಿದೆ ಎಂದು ಆತ ತಂಡಕ್ಕೆ ತಿಳಿಸಿದ್ದ.
ಶಫಿ, ಭಗವಲ್ ಮತ್ತು ಲೈಲಾ ಅವರನ್ನು ಹದಿನೈದು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಮತ್ತು ಇದೀಗ ಎರ್ನಾಕುಲಂ ವಿಶೇಷ ಪೊಲೀಸ್ ತಂಡಕ್ಕೆ ಅವರನ್ನು 12 ದಿನಗಳ ಕಾಲ ಹಸ್ತಾಂತರಿಸಲಾಗಿದೆ.
ಇವುಗಳನ್ನೂ ಓದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.