ADVERTISEMENT

ಕೇರಳದ ಪಂಪಾ, ಇಡಮಲಯಾರ್‌ ಜಲಾಶಯಗಳಿಂದ ನೀರು ಬಿಡುಗಡೆ

ಪಿಟಿಐ
Published 19 ಅಕ್ಟೋಬರ್ 2021, 7:07 IST
Last Updated 19 ಅಕ್ಟೋಬರ್ 2021, 7:07 IST
ಇಡುಕ್ಕಿ ಜಲಾಶಯದ ನೋಟ–ಸಂಗ್ರಹ ಚಿತ್ರ
ಇಡುಕ್ಕಿ ಜಲಾಶಯದ ನೋಟ–ಸಂಗ್ರಹ ಚಿತ್ರ   

ಕೊಚ್ಚಿ: ಕೇರಳದಲ್ಲಿ ಮತ್ತೆ ಮಳೆಯಾಗುವ ಮುನ್ಸೂಚನೆ ಇರುವುದು ಮತ್ತು ಜಲಾಶಯಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿರುವುದರಿಂದ ಮಂಗಳವಾರ ಪಂಪಾ ಮತ್ತು ಇಡಮಲಯಾರ್‌ ಜಲಾಶಯಗಳಿಂದ ಗೇಟ್‌ಗಳನ್ನು(ಸ್ಲ್ಯೂಸ್‌) ತೆರೆಯಲಾಗಿದೆ.

ರಾಜ್ಯ ಸರ್ಕಾರವು ಕಕ್ಕಿ ಮತ್ತು ಶೋಲಾಯರ್‌ ಅಣೆಕಟ್ಟೆಗಳಿಂದ ಹೆಚ್ಚುವರಿ ನೀರಿನ ಸಂಗ್ರಹವನ್ನು ಹೊರಬಿಟ್ಟಿರುವ ಬೆನ್ನಲ್ಲೇ ಈ ಬೆಳವಣಿಗೆ ವರದಿಯಾಗಿದೆ. ಇಡಮಲಯಾರ್‌ ಜಲಾಶಯದ 2 ಮತ್ತು 3ನೇ ಶಟರ್‌ಗಳನ್ನು 50 ಸೆಂ.ಮೀ ವರೆಗೆ ತೆರೆದಿರುವ ಕುರಿತು ಎರ್ನಾಕುಲಂ ಜಿಲ್ಲಾಡಳಿತವು ಖಚಿತಪಡಿಸಿದೆ. ಪಂಪಾ ಜಲಾಶಯದ 3 ಮತ್ತು 4ನೇ ಶಟರ್‌ಗಳನ್ನು 45 ಸೆಂ.ಮೀನಷ್ಟು ತೆರೆದಿರುವುದನ್ನು ಪತನಂತಿಟ್ಟಾ ಜಿಲ್ಲಾಡಳಿತವು ಖಚಿತಪಡಿಸಿದೆ.

ಮಂಗಳವಾರ ಪೆರಿಯಾರ್‌ ನದಿಯ ಹರಿವು ನಿಯಂತ್ರಿಸುವ ಇಡುಕ್ಕಿ ಜಲಾಶಯದಿಂದಲೂ ನೀರು ಹೊರಬಿಡುವುದಾಗಿ ರಾಜ್ಯ ಸರ್ಕಾರ ಪ್ರಕಟಿಸಿದೆ. ಕಳೆದ ವಾರ ಸುರಿದ ಭಾರಿ ಮಳೆಯಿಂದಾಗಿ ಜಲಾನಯನ ಪ್ರದೇಶಗಳಲ್ಲಿ ಬಹುತೇಕ ಜಲಾಶಯಗಳು ಅಪಾಯದ ಮಟ್ಟ ತಲುಪಿವೆ. ಬುಧವಾರದಿಂದ ಮತ್ತೆ ಮಳೆ ಸುರಿಯುವ ಮುನ್ಸೂಚನೆ ಇರುವುದರಿಂದ ಜಲಾಶಯಗಳಿಂದ ನೀರು ಹೊರಬಿಡಲು ನಿರ್ಧರಿಸಲಾಗಿದೆ.

ADVERTISEMENT

ಮಳೆ ಪರಿಸ್ಥಿತಿ ಕಾರಣದಿಂದಾಗಿ ತುಲಾ ಮಾಸದ ಪೂಜೆಗಾಗಿ ಶಬರಿಮಲೆಯ ಅಯ್ಯಪ್ಪ ದೇವಸ್ಥಾನಕ್ಕೆ ಭಕ್ತರು ಪ್ರವೇಶಿಸುವುದಕ್ಕೆ ನಿರ್ಬಂಧ ವಿಧಿಸಲಾಗಿದೆ.

ಮಳೆ, ಪ್ರವಾಹ ಮತ್ತು ಭೂಕುಸಿತದ ಕಾರಣಗಳಿಂದಾಗಿ ಅಕ್ಟೋಬರ್‌ 12ರಿಂದ 18ರ ವರೆಗೂ ಕೇರಳದಲ್ಲಿ 38 ಮಂದಿ ಸಾವಿಗೀಡಾಗಿದ್ದಾರೆ. ಇದೇ ವೇಳೆ ಕನಿಷ್ಠ 90 ಮನೆಗಳು ನಾಶವಾಗಿದ್ದು, 702 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ನದಿ ಪಾತ್ರಗಳಲ್ಲಿರುವ ಜನರನ್ನು ಶಿಬಿರಗಳಿಗೆ ರವಾನಿಸಲು ಕ್ರಮಕೈಗೊಳ್ಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.