ADVERTISEMENT

ಕೇರಳದ ವೈದ್ಯಕೀಯ ವಿಜ್ಞಾನ ಸಂಸ್ಥೆ, ವಿಪ್ರೊದಿಂದ ತುರ್ತು ಉಸಿರಾಟ ಸಾಧನ ಅಭಿವೃದ್ಧಿ

‘ಏರ್ ಬ್ರಿಡ್ಜ್’ ಬ್ರ್ಯಾಂಡ್‌ ಹೆಸರಿನಲ್ಲಿ ಬಿಡುಗಡೆ

ಏಜೆನ್ಸೀಸ್
Published 6 ಜುಲೈ 2020, 14:24 IST
Last Updated 6 ಜುಲೈ 2020, 14:24 IST
‘ಏರ್ ಬ್ರಿಡ್ಜ್’ ಬ್ರ್ಯಾಂಡ್ ಹೆಸರಿನ ತುರ್ತು ಉಸಿರಾಟ ಸಹಾಯ ಸಾಧನ –ಎಎನ್‌ಐ ಚಿತ್ರ
‘ಏರ್ ಬ್ರಿಡ್ಜ್’ ಬ್ರ್ಯಾಂಡ್ ಹೆಸರಿನ ತುರ್ತು ಉಸಿರಾಟ ಸಹಾಯ ಸಾಧನ –ಎಎನ್‌ಐ ಚಿತ್ರ   

ತಿರುವನಂತಪುರ: ಇಲ್ಲಿನ ‘ಶ್ರೀ ಚಿತ್ರ ತಿರುನಾಳ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ’ಯು ಬೆಂಗಳೂರಿನ‘ವಿಪ್ರೊ 3ಡಿ’ ಸಂಸ್ಥೆಯ ಸಹಾಯದೊಂದಿಗೆ ತುರ್ತು ಉಸಿರಾಟ ಸಹಾಯ ಸಾಧನವನ್ನು (ಎಸ್‌ಸಿಟಿಐಎಂಎಸ್‌ಟಿ) ಅಭಿವೃದ್ಧಿಪಡಿಸಿದೆ. ಈ ಸಾಧನವು ವೆಂಟಿಲೇಟರ್‌ಗೆ ಪರ್ಯಾಯ ಅಲ್ಲವಾದರೂ ಕೆಲವು ಗಂಟೆಗಳಿಂದ ಕೆಲವು ದಿನಗಳವರೆಗೆ ತಾತ್ಕಾಲಿಕವಾಗಿ ಬಳಸಬಹುದಾಗಿದೆ.

ಈ ಸಾಧನವು ಉಸಿರಾಟಕ್ಕೆ ನೆರವಾಗಲು ಬೇಕಾದ ಎಲ್ಲ ವ್ಯವಸ್ಥೆ ಹೊಂದಿದ್ದು, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಾನದಂಡಗಳು, ಮಾರ್ಗಸೂಚಿಗಳಿಗೆ ಅನುಗುಣವಾಗಿ ಇದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಸಂಸ್ಥೆಯ ಅರಿವಳಿಕೆ ವಿಭಾಗದ ಪ್ರೊಫೆಸರ್‌ಗಳಾದ ಮಣಿಕಂಠನ್, ಥಾಮಸ್ ಕೋಶಿ ಮತ್ತು ಮೆಡಿಕಲ್ ಡಿವೈಸ್ ಎಂಜಿನಿಯರಿಂಗ್ ವಿಭಾಗದ ಎಂಜಿನಿಯರ್‌ಗಳಾದ ಶರತ್ ಎಸ್ ನಾಯರ್, ವಿನೋದ್ ಕುಮಾರ್ ವಿ, ನಾಗೇಶ್ ಡಿ.ಎಸ್ ಸಾಧನ ಅಭಿವೃದ್ಧಿಪಡಿಸಿದ್ದಾರೆ.

ADVERTISEMENT

ತುರ್ತು ಉಸಿರಾಟ ಸಹಾಯ ಸಾಧನದ ವಿನ್ಯಾಸ, ಗುಣಮಟ್ಟವನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಸಲುವಾಗಿ ಏಪ್ರಿಲ್‌ನಲ್ಲಿ ‘ವಿಪ್ರೊ 3ಡಿ’ ಜತೆ ಒಪ್ಪಂದ ಮಾಡಿಕೊಂಡು ಮಾಹಿತಿ ಹಂಚಿಳ್ಳಲಾಗಿತ್ತು. ಪರಿಣಾಮವಾಗಿ ಇದೀಗ ಸಾಧನವು ‘ಏರ್ ಬ್ರಿಡ್ಜ್’ ಬ್ರ್ಯಾಂಡ್‌ ಹೆಸರಿನಲ್ಲಿ ವಾಣಿಜ್ಯ ಉತ್ಪಾದನೆಯ ಹಂತಕ್ಕೆ ತಲುಪಿದೆ.

ಸಾಧನವನ್ನು ಬೆಂಗಳೂರಿನ ‘ವಿಪ್ರೊ 3ಡಿ’ ಮತ್ತು ತಿರುವನಂತಪುರದ ‘ಶ್ರೀ ಚಿತ್ರ ತಿರುನಾಳ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ’ ಜಂಟಿಯಾಗಿ ವಿಡಿಯೊ ಕಾನ್ಫರೆನ್ಸ್‌ ಮೂಲಕ ಇಂದು (ಸೋಮವಾರ) ಬಿಡುಗಡೆ ಮಾಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.