ADVERTISEMENT

ವಯನಾಡು ಭೂಕುಸಿತ: ನಾಪತ್ತೆಯಾದವರ ಮಾಹಿತಿ ಸಂಗ್ರಹ ಕಾರ್ಯ ಆರಂಭಿಸಿದ ಜಿಲ್ಲಾಡಳಿತ

ಪಿಟಿಐ
Published 31 ಜುಲೈ 2024, 5:30 IST
Last Updated 31 ಜುಲೈ 2024, 5:30 IST
<div class="paragraphs"><p>ವಯನಾಡು ಜಿಲ್ಲೆಯ ಮೆಪ್ಪಾಡಿಯಲ್ಲಿ ಸಂಭವಿಸಿದ ಭೂಕುಸಿತ ದೃಶ್ಯ</p></div>

ವಯನಾಡು ಜಿಲ್ಲೆಯ ಮೆಪ್ಪಾಡಿಯಲ್ಲಿ ಸಂಭವಿಸಿದ ಭೂಕುಸಿತ ದೃಶ್ಯ

   

ವಯನಾಡು: ಜಿಲ್ಲೆಯಲ್ಲಿ ಸರಣಿ ಭೂಕುಸಿತ ಸಂಭವಿಸಿರುವ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದ್ದು, ನಾಪತ್ತೆಯಾಗಿರುವವರ ಸಂಖ್ಯೆ ಪತ್ತೆ ಹಚ್ಚುವ ಸಲುವಾಗಿ ಮಾಹಿತಿ ಸಂಗ್ರಹ ಕಾರ್ಯವನ್ನು ಜಿಲ್ಲಾಡಳಿತ ಆರಂಭಿಸಿದೆ.

ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರದ ವಿಶೇಷ ತಂಡ ದುರಂತ ಸಂಭವಿಸಿರುವ ಪ್ರದೇಶದಲ್ಲಿ ವಾಸವಿದ್ದ ಜನರ ಅಂಕಿ–ಅಂಶಗಳನ್ನು ಪಡಿತರ ಚೀಟಿ ಮತ್ತು ಸರ್ಕಾರದ ದಾಖಲೆಗಳಲ್ಲಿರುವ ಮಾಹಿತಿ ಆಧರಿಸಿ ಕಲೆಹಾಕಿದೆ. ಭೂಕುಸಿತದ ಬಳಿಕ ಪತ್ತೆಯಾಗಿರುವವರು ಮತ್ತು ನಾಪತ್ತೆಯಾಗಿರುವವರ ಸಂಖ್ಯೆಯನ್ನು ತಾಳೆ ಮಾಡುತ್ತಿದೆ ಎಂದು ಜಿಲ್ಲಾಡಳಿತದ ಅಧಿಕಾರಿಗಳು ಬುಧವಾರ (ಇಂದು) ತಿಳಿಸಿದ್ದಾರೆ.

ADVERTISEMENT

ಸಾಧ್ಯವಾದಷ್ಟು ಜನರ ರಕ್ಷಣೆ ಮತ್ತು ಅಗತ್ಯ ವೈದ್ಯಕೀಯ ಸೌಲಭ್ಯ ಒದಗಿಸಲು ಸರ್ಕಾರ ಯೋಜಿಸಿದೆ. ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದೆ. ಸಂತ್ರಸ್ತರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗುತ್ತಿದೆ. ವಯನಾಡಿನಲ್ಲಿನ 45 ಪರಿಹಾರ ಶಿಬಿರಗಳನ್ನು ತೆರೆಯಲಾಗಿದ್ದು, 3,069 ಜನರಿಗೆ ಆಶ್ರಯ ಕಲ್ಪಿಸಲಾಗಿದೆ.

ಭಾರಿ ಮಳೆಯಿಂದಾಗಿ ವಯನಾಡಿನ ಮುಂಡಕ್ಕೈ, ಚೂರಲ್ಮಲ, ಅಟ್ಟಮಳ ಮತ್ತು ನೂಲಪ್ಪುಳ ಪ್ರದೇಶಗಳಲ್ಲಿ ಮಂಗಳವಾರ ಬೆಳಿಗ್ಗೆ ಸರಣಿ ಭೂಕುಸಿತ ಸಂಭವಿಸಿದೆ.

ಇದುವರೆಗೆ 148 ಮಂದಿ ಮೃತಪಟ್ಟಿದ್ದು, 150ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಆತಂಕವಿದೆ. ಸೇನೆ, ವಾಯುಪಡೆ, ನೌಕಾಪಡೆ, ಎನ್‌ಡಿಆರ್‌ಎಫ್‌ ಮತ್ತು ಎಸ್‌ಡಿಆರ್‌ಎಫ್‌ ಸೇರಿದಂತೆ ವಿವಿಧ ಏಜೆನ್ಸಿಗಳು ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.