ADVERTISEMENT

ಭೂಕುಸಿತದಿಂದ ಇಡುಕ್ಕಿಯಲ್ಲಿ ಸತ್ತವರ ಸಂಖ್ಯೆ 24ಕ್ಕೆ ಏರಿಕೆ

ಪಿಟಿಐ
Published 8 ಆಗಸ್ಟ್ 2020, 15:32 IST
Last Updated 8 ಆಗಸ್ಟ್ 2020, 15:32 IST
ಇಡುಕ್ಕಿಯ ಪೆಟ್ಟುಮುಡಿ ಎಂಬಲ್ಲಿ ಸಂಭವಿಸಿರುವ ಭೂಕುಸಿತದ ಪ್ರದೇಶದಲ್ಲಿ ರಕ್ಷಣಾ ಕಾರ್ಯಚರಣೆ ನಡೆಸುತ್ತಿರುವ ಎನ್‌ಡಿಆರ್‌ಎಫ್‌ ಸಿಬ್ಬಂದಿ
ಇಡುಕ್ಕಿಯ ಪೆಟ್ಟುಮುಡಿ ಎಂಬಲ್ಲಿ ಸಂಭವಿಸಿರುವ ಭೂಕುಸಿತದ ಪ್ರದೇಶದಲ್ಲಿ ರಕ್ಷಣಾ ಕಾರ್ಯಚರಣೆ ನಡೆಸುತ್ತಿರುವ ಎನ್‌ಡಿಆರ್‌ಎಫ್‌ ಸಿಬ್ಬಂದಿ    

(ಇಡುಕ್ಕಿ): ಜಿಲ್ಲೆಯಲ್ಲಿ ಶುಕ್ರವಾರ ಸಂಭವಿಸಿದ ಭೂಕುಸಿತ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 24ಕ್ಕೆ ಏರಿದೆ. ನಿರಂತರ ಮಳೆಯ ನಡುವೆಯೂ ಭೂಕುಸಿತದ ನಂತರ ನಾಪತ್ತೆ ಆಗಿರುವರಿಗಾಗಿ ಹುಡುಕಾಟ ನಡೆದಿದೆ. ಭೂಕುಸಿತದಲ್ಲಿ ಟೀ ಎಸ್ಟೇಟ್ ಕಾರ್ಮಿಕರ 20 ಮನೆಗಳು ನೆಲಸಮವಾಗಿದ್ದವು.

ನಾಪತ್ತೆಯಾದವರ ಹುಡುಕಾಟ ಕಾರ್ಯದಲ್ಲಿ ಪೊಲೀಸ್, ಅಗ್ನಿಶಾಮಕ ಸೇವೆ ಸಿಬ್ಬಂದಿ ಜೊತೆಗೆ ಸ್ಥಳೀಯರೂ ಕೈಜೋಡಿಸಿದ್ದಾರೆ. ಜೊತೆಗೆ ರಾಷ್ಟ್ರೀಯ ಪ್ರಾಕೃತಿಕ ವಿಕೋಪ ರಕ್ಷಣಾ ಪಡೆಯ (ಎನ್.ಡಿ.ಆರ್.ಎಫ್) ಎರಡು ತುಕಡಿಗಳನ್ನು ನಿಯೋಜಿಸಲಾಗಿದೆ.

'ಇನ್ನೂ 46 ಜನರು ನಾಪತ್ತೆಯಾಗಿದ್ದಾರೆ. ಅವರಿಗಾಗಿ ಮಳೆಯ ನಡುವೆಯೂ ಹುಡುಕಾಟ ನಡೆದಿದೆ. ಶುಕ್ರವಾರ ರಕ್ಷಿಸಲಾಗಿದ್ದ 12 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ' ಎಂದು ಜಿಲ್ಲಾಧಿಕಾರಿ ಎಚ್.ದಿನೇಶನ್ ತಿಳಿಸಿದ್ದಾರೆ. ಹವಾಮಾನ ಇಲಾಖೆಯು ಜಿಲ್ಲೆಯಲ್ಲಿ ಭಾನುವಾರದವರೆಗೆ ರೆಡ್ ಅಲರ್ಟ್ ಘೋಷಿಸಿದೆ.

ADVERTISEMENT

ಪೆಟ್ಟಿಮುಡಿಯ ಆಕರ್ಷಕ ಭೌಗೋಳಿಕ ಪ್ರದೇಶದ ಚಿತ್ರಣವೇ ಈಗ ಬದಲಾಗಿದ್ದು, ಕುಸಿದಿರುವ ಮಣ್ಣಿನ ನಡುವೆ ಮನೆಯ ಅವಶೇಷಗಳು ಕಾಣಿಸುತ್ತಿವೆ. ಶುಕ್ರವಾರ ಬೆಳಗಿನ ಜಾವ ದೊಡ್ಡ ಪ್ರಮಾಣದಲ್ಲಿ ಭೂಕುಸಿತ ಸಂಭವಿಸಿದ್ದು, ಸಾಲು ಮನೆಗಳು ಕುಸಿದಿದ್ದವು. ಅಂದು ಇಬ್ಬರು ಮಕ್ಕಳು, ಐವರು ಮಹಿಳೆಯರು ಮೃತಪಟ್ಟಿದ್ದರು.

ಎನ್.ಡಿ.ಆರ್.ಎಫ್.ನ ದಕ್ಷಿಣ ಭಾರತದ ಮುಖ್ಯಸ್ಥರಾದ ರೇಖಾ ನಂಬಿಯಾರ್ ಅವರು, ‘ರಕ್ಷಣಾ ಕಾರ್ಯಗಳಿಗೆ 55 ಜನರ ತಂಡವನ್ನು ನಿಯೋಜಿಸಲಾಗಿದೆ. ನದಿ ಪಾತ್ರದಲ್ಲಿಯೂ ಹುಡುಕಾಟ ನಡೆದಿದ್ದು, ದೇಹಗಳು ಮಣ್ಣಿನಡಿ ಸಿಲುಕಿರುವ ಸಂಭವವಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.