ತಿರುವನಂತಪುರ: ಕೇರಳದ ಹಿರಿಯ ಕಮ್ಯುನಿಸ್ಟ್ ನಾಯಕಿ ಕೆ.ಆರ್.ಗೌರಿ ಅಮ್ಮ (102) ಅವರು ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿಮಂಗಳವಾರ ನಿಧನರಾದರು.
ವಯೋಸಹಜ ಕಾಯಿಲೆಯಿಂದಾಗಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮಂಗಳವಾರ ಬೆಳಿಗ್ಗೆ 7 ಗಂಟೆಗೆ ಕೊನೆ ಉಸಿರೆಳೆದರು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಕೇರಳದ ಪ್ರಭಾವಶಾಲಿ ನಾಯಕರಲ್ಲಿ ಒಬ್ಬರಾದ ಗೌರಿ ಅವರನ್ನು ಜನರು ಪ್ರೀತಿಯಿಂದ ಗೌರಿ ಅಮ್ಮ ಎಂದು ಕರೆಯುತ್ತಿದ್ದರು. ಅವರು ಕೇರಳದ ಮೊದಲ ವಿಧಾನಸಭೆಯ ಸದಸ್ಯರೂ ಆಗಿದ್ದರು.
ಇ.ಎಂ.ಎಸ್. ನಂಬೂದಿರಿಪಾಡ್ ನೇತೃತ್ವದ ಕೇರಳದ ಪ್ರಥಮ ಕಮ್ಯುನಿಸ್ಟ್ ಸರ್ಕಾರದಲ್ಲಿ ಕಂದಾಯ ಸಚಿವರಾಗಿದ್ದ ಗೌರಿ ಅವರು ಕ್ರಾಂತಿಕಾರಿ ಕೃಷಿಕ ಸಂಬಂಧ ಮಸೂದೆ ಜಾರಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಇದನ್ನೂ ಓದಿ– ಎಡ ಚಿಂತನೆಗಳ ದೊಂದಿ
ತಮ್ಮ ಸಂಪುಟ ಸಹೋದ್ಯೋಗಿ ಟಿ.ವಿ.ಥಾಮಸ್ ಅವರನ್ನು ವಿವಾಹವಾಗಿದ್ದರು. 1964ರಲ್ಲಿ ಕಮ್ಯುನಿಷ್ಟ್ ಪಕ್ಷ ವಿಭಜನೆಗೊಂಡ ಬಳಿಕ ಗೌರಿ ಅವರು ಸಿಪಿಎಂ ಸೇರಿದ್ದರು. ಅವರ ಪತಿ ಸಿಪಿಐ ಪಕ್ಷದಲ್ಲೇ ಉಳಿದಿದ್ದರು.
1994ರಲ್ಲಿ ಸಿಪಿಐ(ಎಂ) ಪಕ್ಷದಿಂದ ಉಚ್ಛಾಟಿತರಾದ ಗೌರಿ ಅವರು ಜನತಿಪತಿಯ ಸಂರಕ್ಷಣ ಸಮಿತಿ (ಜೆಎಸ್ಎಸ್) ಪಕ್ಷವನ್ನು ಸ್ಥಾಪಿಸಿದ್ದರು. ಇದು ಕಾಂಗ್ರೆಸ್ ನೇತೃತ್ವದ ಯುಡಿಎಫ್‌ನ ಒಂದು ಘಟಕವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.