ADVERTISEMENT

‘ಶತ್ರು ಆಸ್ತಿ’ ವಿವಾದ: ಕೇರಳ ವ್ಯಕ್ತಿಗೆ ಹೈಕೋರ್ಟ್‌ ಪರಿಹಾರ

​ಪ್ರಜಾವಾಣಿ ವಾರ್ತೆ
Published 27 ಜೂನ್ 2024, 16:24 IST
Last Updated 27 ಜೂನ್ 2024, 16:24 IST
.
.   

ತಿರುವನಂತಪುರ: ಪಾಕಿಸ್ತಾನದಲ್ಲಿ ಕೆಲಸ ಮಾಡಿದ್ದ ತಂದೆಯಿಂದ, ಕೇರಳದ ಮಲಪ್ಪುರದ 74 ವರ್ಷದ ವ್ಯಕ್ತಿ ಪಡೆದಿದ್ದ ಭೂಮಿಯ ಮೇಲೆ ವಿಧಿಸಲಾಗಿದ್ದ ‘ಶತ್ರು ಆಸ್ತಿ’ಗೆ ಸಂಬಂಧಿಸಿದ ನಿರ್ಬಂಧಗಳನ್ನು ಕೇರಳ ಹೈಕೋರ್ಟ್‌ ರದ್ದುಗೊಳಿಸಿದೆ. 

ಉದ್ಯೋಗ ಅರಸಿ ಶತ್ರು ದೇಶಕ್ಕೆ ಹೋದಮಾತ್ರಕ್ಕೆ ಯಾವುದೇ ವ್ಯಕ್ತಿಯನ್ನು ಶತ್ರು ರಾಷ್ಟ್ರಕ್ಕೆ ಸೇರಿದವರು ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ವಿಜು ಅಬ್ರಹಾಂ ಅವರಿದ್ದ ಏಕ ಸದಸ್ಯ ಪೀಠ ಸೋಮವಾರ ನೀಡಿದ ತೀರ್ಪಿನಲ್ಲಿ ಉಲ್ಲೇಖಿಸಿದೆ.

ಕೇರಳದಲ್ಲಿರುವ 68 ಸ್ಥಿರ ಆಸ್ತಿಗಳನ್ನು ಗೃಹ ಇಲಾಖೆಯ ‘ಭಾರತದಲ್ಲಿರುವ ಶತ್ರು ಆಸ್ತಿಯನ್ನು ಸುಪರ್ದಿಗೆ ಪಡೆಯುವ ವಿಭಾಗ’ವು (ಸಿಇಪಿಐ) ‘ಶತ್ರು ಆಸ್ತಿ’ಗಳು ಎಂದು ಪಟ್ಟಿ ಮಾಡಿದೆ.

ADVERTISEMENT

ಹೈಕೋರ್ಟ್‌ನ ಈ ಆದೇಶದಿಂದ ಇತರ ಕೆಲ ಪ್ರಕರಣಗಳಿಗೂ ಅನುಕೂಲವಾಗಬಹುದು ಎನ್ನಲಾಗಿದೆ.

ಮಲಪುರದ ಚಿಟ್ಟಿಪ್ಪಾಡಿಯ ನಿವೃತ್ತ ಪೊಲೀಸ್‌ ಅಧಿಕಾರಿ ಪಿ.ಉಮ್ಮರ್‌ ಅವರು, ಪಾಕಿಸ್ತಾನದಲ್ಲಿ ಕೆಲ ಕಾಲ ಕೆಲಸ ಮಾಡಿದ್ದ ತನ್ನ ತಂದೆ ಕುಂಞಿ ಕೋಯಾ ಅವರಿಂದ 20.5 ಸೆಂಟ್‌ ಭೂಮಿಯನ್ನು ಪಡೆದಿದ್ದರು. ಆ ಆಸ್ತಿಗೆ ಭೂ ತೆರಿಗೆ ಪಾವತಿಸಲು ಹೋದಾಗ,  ಪರಪ್ಪನಂಗಡಿ ಗ್ರಾಮಾಧಿಕಾರಿ ಅದನ್ನು ಸ್ವೀಕರಿಸಲು ನಿರಾಕರಿಸಿದರು.

ಈ ಆಸ್ತಿಯನ್ನು ‘ಶತ್ರು ಆಸ್ತಿ ಕಾಯ್ದೆ–1968’ರ ವ್ಯಾಪ್ತಿಗೆ ತರಲಾಗಿದೆ. ಅರ್ಜಿದಾರರ ತಂದೆಯನ್ನು ‘ಶತ್ರು’ (ಪಾಕಿಸ್ತಾನ ಪ್ರಜೆ) ಎಂದು ಶಂಕಿಸಲಾಗಿದೆ. ಆ ಆಸ್ತಿಯ ಕುರಿತು ಸಿಇಪಿಐ ತನಿಖೆ ನಡೆಸುತ್ತಿದೆ ಎಂದು ಕಂದಾಯ ಅಧಿಕಾರಿಗಳು ಉಲ್ಲೇಖಿಸಿದ್ದಾರೆ.

ಇದನ್ನು ಉಮ್ಮರ್‌ ಅವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಅವರ ವಕೀಲ ಎಂ.ಎ.ಆಸಿಫ್‌ ಅವರು, ‘ಉಮ್ಮರ್‌ ಅವರ ತಂದೆ 1902ರಲ್ಲಿ ಮಲಪ್ಪುರದಲ್ಲಿ ಜನಿಸಿದರು. ಸಂವಿಧಾನ ಜಾರಿಯಾದ 1950ರಲ್ಲಿಯೂ ಅವರು ಭಾರತದಲ್ಲಿಯೇ ಇದ್ದರು. 1953ರಲ್ಲಿ ಅವರು ಉದ್ಯೋಗಕ್ಕಾಗಿ ಪಾಕಿಸ್ತಾನಕ್ಕೆ ಹೋಗಿದ್ದರು. ಅಲ್ಲಿ ಅಲ್ಪಕಾಲ ಹೋಟೆಲ್‌ನಲ್ಲಿ ಸಹಾಯಕರಾಗಿ ಕೆಲಸ ಮಾಡಿದ್ದರು’ ಎಂದು ಹೇಳಿದರು. ‌

‘ಕುಂಞಿ ಅವರು ಪಾಕಿಸ್ತಾನದ ಪೌರತ್ವವನ್ನು ಪಡೆದುಕೊಳ್ಳದ ಕಾರಣ ಅವರು ಭಾರತೀಯ ಪ್ರಜೆಯಾಗಿ ಮುಂದುವರಿದಿದ್ದಾರೆ ಎಂದು ಕೇಂದ್ರವು ಆಗಲೇ ದೃಢಪಡಿಸಿತ್ತು. ಅಲ್ಲದೆ ಕುಂಞಿ ಅವರು ನಿಧನರಾಗಿದ್ದೂ ಭಾರತದಲ್ಲಿಯೇ. ಅವರ ಅಂತ್ಯಕ್ರಿಯೆಯೂ ಮಲಪ್ಪುರದಲ್ಲಿಯೇ ನಡೆದಿದೆ. ಇವೆಲ್ಲ ಕಾರಣಕ್ಕಾಗಿ ಅವರ ಆಸ್ತಿಯನ್ನು ‘ಶತ್ರು ಆಸ್ತಿ’ ಎಂದು ಪರಿಗಣಿಸಲು ಆಗುವುದಿಲ್ಲ’ ಎಂದು ವಕೀಲ ಆಸಿಫ್‌ ಪ್ರತಿಪಾದಿಸಿದರು.

ವಾದವನ್ನು ಆಲಿಸಿದ ನ್ಯಾಯಮೂರ್ತಿಯವರು ಅರ್ಜಿದಾರರ ತಂದೆಯನ್ನು ‘ಶತ್ರು’ ಎಂದು ಕರೆಯಲಾಗದು. ಹಾಗೆಯೇ ಅವರ ಆಸ್ತಿಯನ್ನು ‘ಶತ್ರು ಆಸ್ತಿ’ ಎಂದೂ ಪರಿಗಣಿಸಲಾಗದು. ಹೀಗಾಗಿ ಅವರ ಜಮೀನಿನ ಮೇಲೆ ವಿಧಿಸಲಾಗಿರುವ ನಿರ್ಬಂಧವನ್ನು ರದ್ದುಗೊಳಿಸಬೇಕು ಎಂದು ಆದೇಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.