ADVERTISEMENT

ಮನೆಗೆ ಬೆಂಕಿ: ನಿದ್ದೆಯಲ್ಲಿದ್ದ ಮಗ–ಸೊಸೆ, ಇಬ್ಬರು ಮೊಮ್ಮಕ್ಕಳನ್ನು ಕೊಂದ ವೃದ್ಧ

ಪಿಟಿಐ
Published 19 ಮಾರ್ಚ್ 2022, 11:15 IST
Last Updated 19 ಮಾರ್ಚ್ 2022, 11:15 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಇಡುಕ್ಕಿ: ಆಸ್ತಿ ವಿಚಾರವಾಗಿ ವೃದ್ಧರೊಬ್ಬರು ಶನಿವಾರ ಮುಂಜಾನೆ ತನ್ನ ಮನೆಗೇ ಬೆಂಕಿ ಹಚ್ಚುವ ಮೂಲಕ ಮಗ ಮತ್ತು ಕುಟುಂಬದ ಇತರ ಮೂವರ ಸಾವಿಗೆ ಕಾರಣರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯ ಮಗ, ಸೊಸೆ ಮತ್ತು ಶಾಲೆಗೆ ತೆರಳುತ್ತಿದ್ದ ಇಬ್ಬರು ಮೊಮ್ಮಕ್ಕಳು ಮನೆಯಲ್ಲಿ ಮಲಗಿದ್ದ ವೇಳೆ ವೃದ್ಧ ಮನೆಗೆ ಬೆಂಕಿ ಹಚ್ಚಿದ್ದು, ಜೀವಂತವಾಗಿ ಸುಟ್ಟು ಕರಕಲಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ

79 ವರ್ಷದ ಹಮೀದ್ ಎಂಬಾತ ಪೆಟ್ರೋಲ್ ತುಂಬಿದ್ದ ಬಾಟಲಿಗಳನ್ನು ಕಿಟಕಿ ಮೂಲಕ ಮನೆಯ ಒಳಗಡೆ ಎಸೆದಿದ್ದಾರೆ. ಬಳಿಕ ಮನೆಯ ಬಾಗಿಲನ್ನು ಹೊರಗಿನಿಂದ ಲಾಕ್ ಮಾಡಿ ಬೆಂಕಿ ಹಚ್ಚಿದ್ದಾರೆ. ಇದಾದ ಬಳಿಕ ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ADVERTISEMENT

ಬೆಂಕಿಯನ್ನು ಗಮನಿಸಿದ ಕುಟುಂಬ ಸದಸ್ಯರಲ್ಲಿ ಒಬ್ಬರು ಎಚ್ಚೆತ್ತು ಸಹಾಯಕ್ಕಾಗಿ ಅಂಗಲಾಚಿದ್ದಾರೆ. ಆದರೆ ಬೆಂಕಿಯೂ ಮನೆಯನ್ನು ಪೂರ್ತಿ ಆವರಿಸಿದ್ದರಿಂದ ನೆರೆಹೊರೆಯವರು ಅವರನ್ನು ರಕ್ಷಿಸಲು ಸಾಧ್ಯವಾಗಿಲ್ಲ.

ಹಮೀದ್, ಪೆಟ್ರೋಲ್ ತುಂಬಿದ್ದ ಬಾಟಲಿಯನ್ನು ಮನೆಯತ್ತ ಎಸೆಯುತ್ತಿದ್ದುದನ್ನು ನೋಡಿದ್ದಾಗಿ ನೆರೆಮನೆಯವರು ತಿಳಿಸಿದ್ದಾರೆ.

ಅಪರಾಧ ಎಸಗಲು ಹಮೀದ್, ಕನಿಷ್ಠ ಐದು ಬಾಟಲಿಗಳಲ್ಲಿ ಪೆಟ್ರೋಲ್ ತುಂಬಿಟ್ಟಿದ್ದರು ಮತ್ತು ಬೆಂಕಿಯನ್ನು ನಂದಿಸಲು ಯಾವುದೇ ಸಂಭವನೀಯ ಪ್ರಯತ್ನಗಳನ್ನು ತಡೆಯಲು ಮನೆಯಲ್ಲಿದ್ದ ನೀರಿನ ಟ್ಯಾಂಕ್ ಅನ್ನು ಸಹ ಖಾಲಿ ಮಾಡಿದ್ದರು. ನೆರೆಹೊರೆಯವರು ಸಹಾಯ ಮಾಡಬಹುದೆಂದು ಬಾವಿಯಲ್ಲಿದ್ದ ಬಕೆಟ್ ಮತ್ತು ಹಗ್ಗವನ್ನು ಸಹ ತೆಗೆದಿಟ್ಟಿದ್ದರು. ಇದನ್ನು ಗಮನಿಸಿದರೆ ಇದು ಪೂರ್ವ ಯೋಜಿತ ಕೊಲೆ' ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಂದೆ ಮತ್ತು ಮಗಳು ಅಪ್ಪಿಕೊಂಡು ಮಲಗಿರುವಂತೆಯೇ ಅವರ ದೇಹಗಳು ಸುಟ್ಟುಕರಕಲಾಗಿವೆ. ಮುಂದಿನ ಪ್ರಕ್ರಿಯೆಗಾಗಿ ಆ ಮೃತ ದೇಹಗಳನ್ನು ಬೇರ್ಪಡಿಸುವುದು ನಮಗೆ ಕಷ್ಟವಾಯಿತು ಎಂದು ತಿಳಿಸಿದ್ದಾರೆ.

ತನಿಖೆ ವೇಳೆ ಹಮೀದ್, ಆಸ್ತಿ ವಿಚಾರವಾಗಿ ತನ್ನ ಮಗ ಸೇರಿದಂತೆ ಆತನ ಕುಟುಂಬವನ್ನು ಕೊಂದಿದ್ದಾಗಿ ತಪ್ಪನ್ನು ಒಪ್ಪಿಕೊಂಡಿದ್ದಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.