ವಯನಾಡ್(ಕೇರಳ): ವಯನಾಡ್ ಭೂಕುಸಿತದ ಸಂತ್ರಸ್ತರಿಗೆ ಸಾಂತ್ವನ ಹೇಳುವ ವೇಳೆ ಅವರ ನೋವಿನ ಕಥೆಗಳನ್ನು ಕೇಳಿ ಸಚಿವ ಎ.ಕೆ.ಶಶೀಂದ್ರನ್ ಅವರು ಭಾವುಕರಾಗಿದ್ದಾರೆ.
ಇಂದು ಭೂಕುಸಿತ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿರುವ ಸಚಿವ ಶಶೀಂದ್ರನ್, ದುರಂತದಲ್ಲಿ ಮನೆ–ಕುಟುಂಬ ಸದಸ್ಯರನ್ನು ಕಳೆದುಕೊಂಡ ತಂದೆ–ಮಗನನ್ನು ಮಾತನಾಡಿಸಿದ್ದಾರೆ. ದುಃಖಿತ ಕುಟುಂಬದ ನೋವಿನ ಮಾತುಗಳನ್ನು ಕೇಳಿ ಸಚಿವರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಬಾಲಕನನ್ನು ತಬ್ಬಿಕೊಂಡು ಸಂತೈಸಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶಶೀಂದ್ರನ್, ‘ನನ್ನ ಜೀವನದಲ್ಲಿ ಇಂತಹ ಪರಿಸ್ಥಿತಿಯನ್ನು ಎದುರಿಸುತ್ತೇನೆ ಎಂದುಕೊಂಡಿರಲಿಲ್ಲ. ಅವರಿಗೆ ನಾನೇನು ಉತ್ತರ ಹೇಳಲಿ? ಅವರ ಪ್ರಶ್ನೆಗೆ ನನ್ನಲ್ಲಿ ಉತ್ತರವಿಲ್ಲ’ ಎಂದು ಹೇಳಿದರು.
‘ಸಂತ್ರಸ್ತರ ಜೀವನವನ್ನು ಪುನರ್ ನಿರ್ಮಾಣ ಮಾಡಲು ಎಲ್ಲರು ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ. ಈ ಪರಿಸ್ಥತಿಯಲ್ಲಿ ಇಡೀ ರಾಜ್ಯ ಸರ್ಕಾರ ಅವರ ಪರವಾಗಿ ನಿಂತಿದೆ’ ಎಂದು ಹೇಳಿದರು.
ದುರಂತದಲ್ಲಿ ನಾಪತ್ತೆಯಾದ ಸುಮಾರು 130ಕ್ಕೂ ಹೆಚ್ಚು ಜನರ ಪತ್ತೆಗಾಗಿ ಮತ್ತೆ ರಕ್ಷಣಾ ಕಾರ್ಯಾಚರಣೆ ಪ್ರಾರಂಭವಾಗಿದೆ. ಭೂಕುಸಿತದಲ್ಲಿ ಸುಮಾರು 266ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ.
ಶನಿವಾರ ವಯನಾಡ್ ಜಿಲ್ಲೆಗೆ ಆಗಮಿಸಿದ ಪ್ರಧಾನಿ ಮೋದಿ ಅವರು ಭೂಕುಸಿತ ಸಂಭವಿಸಿದ ಪ್ರದೇಶದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಪರಿಹಾರ ಶಿಬಿರಗಳಿಗೆ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.