ಕೊಲ್ಲಂ/ನವದೆಹಲಿ: ನೀಟ್ ಪರೀಕ್ಷೆ ಬರೆಯುವ ಮುನ್ನ ವಿದ್ಯಾರ್ಥಿನಿಯೊಬ್ಬರ ಒಳಉಡುಪು ತೆಗೆಸಿ ಅವಮಾನ ನಡೆಸಲಾಗಿದೆ ಎನ್ನುವ ದೂರಿಗೆ ಸಂಬಂಧಿಸಿದಂತೆ ಮಂಗಳವಾರ ದಕ್ಷಿಣ ಕೇರಳದಲ್ಲಿ ನಡೆದ ಪ್ರತಿಭಟನೆಯು ಹಿಂಸೆಗೆ ತಿರುಗಿದ್ದು, ‘ದೂರಿನಲ್ಲಿ ವಿದ್ಯಾರ್ಥಿನಿ ಆರೋಪಿಸಿರುವುದು ಕಾಲ್ಪನಿಕ’ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಹೇಳಿದೆ.
ಸೋಮವಾರ ಆರಂಭವಾಗಿದ್ದ ಪ್ರತಿಭಟನೆಗಳು ಮಂಗಳವಾರ ತೀವ್ರಗೊಂಡಿದ್ದು, ಪ್ರತಿಭಟನಕಾರರು ಕೊಲ್ಲಂ ಜಿಲ್ಲೆಯ ಆಯುರ್‌ನಲ್ಲಿರುವ ಖಾಸಗಿ ಶಿಕ್ಷಣ ಸಂಸ್ಥೆಯೊಂದನ್ನು ಹಾಳುಗಡೆವಿದ್ದಾರೆ. ಪೊಲೀಸ್ ಸರ್ಪಗಾವಲಿನ ನಡುವೆಯೇ ವಿದ್ಯಾರ್ಥಿ ಪ್ರತಿಭಟನಕಾರರು ಘಟನೆ ನಡೆದಿದೆ ಎನ್ನಲಾದ ಕಾಲೇಜು ಆವರಣಕ್ಕೆ ನುಗ್ಗಿ, ಹಾನಿಗೀಡು ಮಾಡಿದ್ದಾರೆ. ಪೊಲೀಸರು ನಡೆಸಿದ ದಾಳಿಯಲ್ಲಿ ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ವಿದ್ಯಾರ್ಥಿನಿಯನ್ನು ನಡೆಸಿಕೊಂಡ ಕ್ರಮದ ಕುರಿತು ಎನ್‌ಟಿಎ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೇರಳ ಸರ್ಕಾರ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದು, ವಿದ್ಯಾರ್ಥಿನಿಯ ದೂರಿನ ಆಧಾರದ ಮೇಲೆ ಕೇರಳ ಮಹಿಳಾ ಆಯೋಗವು ಪ್ರಕರಣ ದಾಖಲಿಸಿಕೊಂಡಿದೆ.
ಕೇರಳದ ಉನ್ನತ ಶಿಕ್ಷಣ ಸಚಿವೆ ಆರ್. ಬಿಂದು ಅವರು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಪತ್ರ ಬರೆದಿದ್ದು, ‘ಬಾಲಕಿಯರ ಘನತೆ ಮತ್ತು ಗೌರವದ ಧಕ್ಕೆಯಾಗಿರುವುದು ಆಘಾತ ತಂದಿದೆ’ ಎಂದಿದ್ದಾರೆ. ‘ಮುಂದಿನ ದಿನಗಳಲ್ಲಿ ಇಂಥ ಘಟನೆಗಳು ನಡೆಯದಂತೆ ಕೇಂದ್ರ ಸಚಿವರು ಮಧ್ಯಪ್ರವೇಶಿಸಬೇಕು’ ಎಂದೂ ಬಿಂದು ಕೋರಿದ್ದಾರೆ.
ಈ ಸಂಬಂಧ ರಾಜ್ಯ ಪೊಲೀಸರು ಈಗಾಗಲೇ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೊಲ್ಲಂ ಜಿಲ್ಲೆಯಲ್ಲಿ ಎನ್‌ಟಿಎಯಿಂದ ನೇಮಕಗೊಂಡ ಏಜೆನ್ಸಿಯು ತಪಾಸಣೆ ನಡೆಸುವ ಉದ್ದೇಶದಿಂದ ತನ್ನ ಒಳಉಡುಪನ್ನು ತೆಗೆಸಿತ್ತು ಎಂದು17 ವರ್ಷದ ವಿದ್ಯಾರ್ಥಿನಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದರು. ಇತರ ಹಲವು ವಿದ್ಯಾರ್ಥಿನಿಯರೂ ಇದೇ ರೀತಿಯ ಆರೋಪಗಳನ್ನು ಮಾಡಿದ್ದು, ಆದರೆ, ಅವರು ಪ್ರತ್ಯೇಕವಾಗಿ ದೂರುಗಳನ್ನು ಸಲ್ಲಿಸಿಲ್ಲ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಎನ್‌ಟಿಎಯ ಹಿರಿಯ ಅಧಿಕಾರಿಯೊಬ್ಬರು, ‘ಈ ಕುರಿತು ಇದುವರೆಗೆ ನಾವು ಯಾವುದೇ ದೂರುಗಳನ್ನು ಸ್ವೀಕರಿಸಿಲ್ಲ. ಮಾಧ್ಯಮಗಳ ವರದಿ ಆಧಾರದಲ್ಲಿ ಪರೀಕ್ಷಾ ಕೇಂದ್ರದ ಮುಖ್ಯಸ್ಥ ಹಾಗೂ ಪರಿವೀಕ್ಷಕರಿಂದ ವಿವರಣೆಯನ್ನು ಕೇಳಲಾಗಿತ್ತು.ಅಂಥ ಯಾವುದೇ ಘಟನೆಗಳು ನಡೆದಿಲ್ಲ. ದೂರಿನಲ್ಲಿ ಆರೋಪಿಸಿರುವ ಸಂಗತಿಯು ಕಾಲ್ಪನಿಕವಾಗಿದ್ದು, ದುರುದ್ದೇಶಪೂರಿತವಾಗಿದೆ ಎಂಬ ವಿವರಣೆ ನೀಡಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.
'ಅಭ್ಯರ್ಥಿಗಳನ್ನು ಪರಿಶೀಲಿಸುವಾಗ ಲಿಂಗ, ಧರ್ಮ ಮತ್ತು ಧರ್ಮದ ಸೂಕ್ಷ್ಮತೆಯನ್ನು ಗಮನಿಸಲಾಗುತ್ತದೆ. ಅದಕ್ಕೆ ಧಕ್ಕೆ ಬಾರದಂತೆ ವಸ್ತ್ರಸಂಹಿತೆ ರೂಪಿಸಲಾಗಿರುತ್ತದೆ’ ಎಂದೂ ಅಧಿಕಾರಿ ಸ್ಪಷ್ಟನೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.