ADVERTISEMENT

ಜಮ್ಮು-ಕಾಶ್ಮೀರವನ್ನು ಭಾರತ ಆಕ್ರಮಿತ ಎಂದು ವಿವಾದ ಸೃಷ್ಟಿಸಿದ ಕೇರಳ ಶಾಸಕ ಜಲೀಲ್‌

ಪಿಟಿಐ
Published 12 ಆಗಸ್ಟ್ 2022, 13:37 IST
Last Updated 12 ಆಗಸ್ಟ್ 2022, 13:37 IST
 ಶಾಸಕ ಕೆ ಟಿ ಜಲೀಲ್ (ಫೇಸ್‌ಬುಕ್‌ ಚಿತ್ರ: facebook.com/drkt.jaleel)
ಶಾಸಕ ಕೆ ಟಿ ಜಲೀಲ್ (ಫೇಸ್‌ಬುಕ್‌ ಚಿತ್ರ: facebook.com/drkt.jaleel)   

ತಿರುವನಂತಪುರ: ಕೇರಳದ ಮಾಜಿ ಸಚಿವ ಮತ್ತು ಆಡಳಿತಾರೂಢ ಎಲ್‌ಡಿಎಫ್‌ನ ಶಾಸಕ ಕೆ ಟಿ ಜಲೀಲ್ ಅವರು ಶುಕ್ರವಾರ ಜಮ್ಮು ಮತ್ತು ಕಾಶ್ಮೀರವನ್ನು 'ಭಾರತದ ಅಧೀನ ಜಮ್ಮು ಮತ್ತು ಕಾಶ್ಮೀರ’ (ಭಾರತ ಆಕ್ರಮಿತ ಜಮ್ಮು ಮತ್ತು ಕಾಶ್ಮೀರ) ಎಂದಿದ್ದಾರೆ. ಅಲ್ಲದೇ, ಪಾಕ್ ಆಕ್ರಮಿತ ಕಾಶ್ಮೀರವನ್ನು 'ಆಜಾದ್ ಕಾಶ್ಮೀರ' ಎಂದು ಹೇಳುವ ಮೂಲಕ ಭಾರೀ ವಿವಾದ ಸೃಷ್ಟಿಸಿದ್ದಾರೆ.

ತಮ್ಮ ಕಾಶ್ಮೀರ ಭೇಟಿಗೆ ಸಂಬಂಧಿಸಿದಂತೆ ಫೇಸ್ ಬುಕ್ ಪೋಸ್ಟ್ ನಲ್ಲಿ ಜಲೀಲ್‌ ಈ ಮಾತುಗಳನ್ನು ಉಲ್ಲೇಖಿಸಿದ್ದಾರೆ. ‘ಪಾಕಿಸ್ತಾನಕ್ಕೆ ಸೇರ್ಪಡೆಗೊಂಡಿರುವ ಕಾಶ್ಮೀರದ ಭಾಗ 'ಆಜಾದ್ ಕಾಶ್ಮೀರ'ವಾಗಿದ್ದು, ಅದರ ಮೇಲೆ ಪಾಕ್‌ ಸರ್ಕಾರದ ನೇರ ನಿಯಂತ್ರಣವಿಲ್ಲ’ ಎಂದು ಜಲೀಲ್‌ ಅವರು ಮಲಯಾಳಂನಲ್ಲಿ ಪ್ರಕಟಿಸಿದ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ADVERTISEMENT

ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ನೇತೃತ್ವದ ಹಿಂದಿನ ಎಲ್‌ಡಿಎಫ್ ಸರ್ಕಾರದಲ್ಲಿ ಜಲೀಲ್ ಸಚಿವರಾಗಿದ್ದರು.

‘ಭಾರತದ ಅಧೀನ ಜಮ್ಮು ಮತ್ತು ಕಾಶ್ಮೀರ’ (ಭಾರತ ಆಕ್ರಮಿತ ಜಮ್ಮು ಮತ್ತು ಕಾಶ್ಮೀರ) ಜಮ್ಮು, ಕಾಶ್ಮೀರ ಕಣಿವೆ ಮತ್ತು ಲಡಾಖ್‌ನ ಭಾಗಗಳನ್ನು ಒಳಗೊಂಡಿದೆ’ ಎಂದು ಜಲೀಲ್‌ ಹೇಳಿದ್ದಾರೆ.

ಜಲೀಲ್‌ ಅವರ ಮಾತುಗಳನ್ನು ಬಿಜೆಪಿ ನಾಯಕ ಸಂದೀಪ್ ವಾರಿಯರ್ ಟೀಕಿಸಿದ್ದಾರೆ.

‘ಜಲೀಲ್ ಅವರ ಹೇಳಿಕೆ ಗಂಭೀರವಾದದ್ದು. ಅವರ ವಿಷಕಾರಿ ಚಿಂತನೆಯು ಅವರು ಬರೆದಿರುವ ಸಾಲುಗಳಲ್ಲಿ ಪ್ರದರ್ಶನವಾಗುತ್ತಿದೆ’ ಎಂದು ಸಂದೀಪ್‌ ಹೇಳಿದ್ದಾರೆ.

ಜಲೀಲ್‌ ಅವರ ಫೇಸ್‌ಬುಕ್ ಪೋಸ್ಟ್ ಓದಿದ ನಂತರ ಪ್ರತಿಕ್ರಿಯಿಸುವುದಾಗಿ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ತಿಳಿಸಿದ್ದಾರೆ.

ಇವುಗಳನ್ನೂ ಓದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.