ಹೋಶಿಯಾರಪುರ್: ಕೇರಳದಲ್ಲಿ ಬಿಷಪ್ ಫ್ರಾಂಕೊ ಮುಳಕ್ಕಲ್ ಅವರು ಕ್ರೈಸ್ತ ಸನ್ಯಾಸಿನಿ ಮೇಲೆಅತ್ಯಾಚಾರ ನಡೆಸಿದ್ದಾರೆ ಎನ್ನಲಾದ ಪ್ರಕರಣದಲ್ಲಿ ಸಾಕ್ಷ್ಯ ನುಡಿದಿದ್ದ ಫಾದರ್ ಕುರಿಯಾಕೋಸ್ ಕಾಟ್ಟುತ್ತರ (62) ಅವರು ಪಂಜಾಬ್‌ನ ಡಸುಯಾದ ಚರ್ಚ್‌ನಲ್ಲಿ ನಿಗೂಢವಾಗಿ ಸಾವಿಗೀಡಾಗಿದ್ದಾರೆ.
ಕಾಟ್ಟುತ್ತರ ಅವರು ಸೋಮವಾರ ಬೆಳಿಗ್ಗೆ ಚರ್ಚ್‌ನ ತಮ್ಮ ಕೋಣೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅಷ್ಟೊತ್ತಿಗೆ ಅವರು ಮೃತಪಟ್ಟಿದ್ದರು ಎಂದುಪೊಲೀಸರು ತಿಳಿಸಿದ್ದಾರೆ.
‘ಮರಣೋತ್ತರ ಪರೀಕ್ಷೆ ನಂತರ ಸಾವಿಗೆ ಕಾರಣ ಗೊತ್ತಾಗಲಿದೆ. ದೇಹದ ಮೇಲೆ ಗಾಯದ ಗುರುತುಗಳೇನೂ ಇಲ್ಲ. ಕೋಣೆಯಲ್ಲಿ ಅವರು ವಾಂತಿ ಮಾಡಿಕೊಂಡಿದ್ದು, ಅದರ ಮಾದರಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗುವುದು’ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ) ಎ.ಆರ್.ಶರ್ಮಾ ತಿಳಿಸಿದ್ದಾರೆ.
15 ದಿನಗಳ ಹಿಂದೆ ಇವರನ್ನು ಡಸುಯಾದ ಕ್ಯಾಥೋಲಿಕ್ ಚರ್ಚ್‌ಗೆ ವರ್ಗಾಯಿಸಲಾಗಿತ್ತು.ಚರ್ಚ್‌ನ ಆವರಣದಲ್ಲಿಯೇ ಅವರು ವಾಸವಿದ್ದರು. ಚರ್ಚ್ ಆವರಣದಲ್ಲಿ ಶಾಲೆ ಸಹ ಇದೆ.
‘ಬಿಷಪ್ ವಿರುದ್ಧ ಸಾಕ್ಷ್ಯ ಹೇಳಿದ ನಂತರ ಕಟ್ಟುತ್ತರ ಅವರು ಆತಂಕಗೊಂಡಿದ್ದರು. ಅವರ ಸಾವಿನ ಬಗ್ಗೆ ಸಮಗ್ರವಾಗಿ ತನಿಖೆಯಾಗಬೇಕು. ಮರಣೋತ್ತರ ಪರೀಕ್ಷೆಯನ್ನು ಅಲೆಪ್ಪಿ ವೈದ್ಯಕೀಯ ಕಾಲೇಜಿನಲ್ಲಿ ನಡೆಸಬೇಕು’ ಎಂದು ಅವರ ಕುಟುಂಬದವರು ಒತ್ತಾಯಿಸಿದ್ದಾರೆ.
ಕೇರಳದ ನ್ಯಾಯಾಲಯವು ಬಿಷಪ್ ಫ್ರಾಂಕೊ ಮುಳಕ್ಕಲ್ ಅವರಿಗೆ ಕಳೆದ ವಾರ ಜಾಮೀನು ನೀಡಿತ್ತು. ಅವರು ಜಲಂಧರ್‌ಗೆ ಬಂದಿದ್ದಾರೆ.
ಪ್ರಮುಖ ಸಾಕ್ಷಿಯ ಸಾವಿನಿಂದ ಆತಂಕಗೊಂಡಿರುವ ಕ್ರೈಸ್ತ ಸನ್ಯಾಸಿನಿಯ ಕುಟುಂಬದವರು ಸೂಕ್ತ ಭದ್ರತೆ ಒದಗಿಸುವಂತೆ ಕೇರಳ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಕುರವಿಲಂಗಡ ಸಮೀಪದ ಅತಿಥಿ ಗೃಹದಲ್ಲಿ 2014ರಿಂದ 2016ರವರೆಗೆ ಹಲವು ಬಾರಿ ಅತ್ಯಾಚಾರ ಮತ್ತು ಅಸ್ವಾಭಾವಿಕ ಲೈಂಗಿಕ ಚಟುವಟಿಕೆ ನಡೆಸಿದ್ದಾರೆ ಎಂದು ಕ್ರೈಸ್ತ ಸನ್ಯಾಸಿನಿ ಕೊಟ್ಟಾಯಂ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಆರೋಪವನ್ನು ಮುಳಕ್ಕಲ್‌ನಿರಾಕರಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.