ತಿರುವನಂತಪುರಂ: ಕೇರಳದಲ್ಲಿ ಕೋವಿಡ್–19 ಪರಿಸ್ಥಿತಿಯನ್ನು ನಿಭಾಯಿಸಿದ ರೀತಿಯಿಂದ ಮೆಚ್ಚುಗೆಗೆ ಪಾತ್ರರಾದ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ, ರಾಜ್ಯದ ಹೊಸ ಸಂಪುಟದಲ್ಲಿ ಸ್ಥಾನ ಪಡೆದಿಲ್ಲ. ಸಚಿವ ಸಂಪುಟಕ್ಕೆ ಸಿಪಿಐ(ಎಂ)ನ ಹನ್ನೊಂದು ಹೊಸ ಮುಖಗಳನ್ನು ಪಕ್ಷವು ಗುರುತಿಸಿದೆ.
ಪಿಣರಾಯಿ ವಿಜಯನ್ ಅವರನ್ನು ಪಕ್ಷದ ಸಂಸದೀಯ ನಾಯಕ ಮತ್ತು ಮುಖ್ಯಮಂತ್ರಿಯಾಗಿ ಸಿಪಿಐ(ಎಂ)ನ ರಾಜ್ಯ ಸಮಿತಿಯು ಆಯ್ಕೆ ಮಾಡಿದೆ. ಎಲ್ಲ ಹಾಲಿ ಸಚಿವರನ್ನು ಸಂಪುಟದಿಂದ ಕೈಬಿಡಲಾಗಿದ್ದು, ಕೆ.ಕೆ.ಶೈಲಜಾ ಅವರು ಪಕ್ಷದ ಪ್ರಮುಖ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಎಂ.ಬಿ.ರಾಜೇಶ್ ಅವರನ್ನು ಪಕ್ಷವು ಸ್ಪೀಕರ್ ಸ್ಥಾನಕ್ಕೆ ಆಯ್ಕೆ ಮಾಡಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೊರತು ಪಡಿಸಿ, ಸಚಿವ ಸಂಪುಟದಲ್ಲಿ ಬಹುತೇಕ ಹೊಸಬರಿಗೆ ಸ್ಥಾನ ಕಲ್ಪಿಸಲಾಗಿದೆ. ಪಿಣರಾಯಿ ವಿಜಯನ್ ಅವರ ಅಳಿಯ ಪಿ.ಎ.ಮೊಹಮ್ಮದ್ ರಿಯಾಸ್ ಮತ್ತು ಪಕ್ಷದ ಕಾರ್ಯದರ್ಶಿ ಎ.ವಿಜಯರಾಘವನ್ ಅವರ ಪತ್ನಿ ಆರ್.ಬಿಂದು ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ.
ಈ ಸಂಪುಟವು ಯುವಕರು ಮತ್ತು ಅನುಭವಿಗಳ ಸಂಯೋಜನೆಯಾಗಿರಲಿದೆ ಎಂದು ಪಕ್ಷದ ಮುಖಂಡ ಎ.ಎನ್.ಶಮ್ಸೀರ್ ಹೇಳಿದ್ದಾರೆ.
ಕೇರಳದಲ್ಲಿ ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರದ ಗದ್ದುಗೆಯೇರಲಿರುವ ಪಿಣರಾಯಿ ವಿಜಯನ್ ಅವರು ಮೇ 20ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಎಂ.ವಿ.ಗೋವಿಂದನ್, ಕೆ.ರಾಧಾಕೃಷ್ಣನ್, ಕೆ.ಎನ್.ಬಾಲಗೋಪಾಲ್, ಪಿ.ರಾಜೀವ್, ವಿ.ಎನ್.ವಾಸವನ್, ಸಾಜಿ ಚೆರಿಯನ್, ವಿ.ಶಿವನ್‌ಕುಟ್ಟಿ, ಮೊಹಮ್ಮದ್ ರಿಯಾಸ್, ಡಾ.ಆರ್.ಬಿಂದು, ವೀಣಾ ಜಾರ್ಜ್ ಹಾಗೂ ವಿ.ಅಬ್ದುಲ್ ರಹಮಾನ್ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಸುಮಾರು 40 ವರ್ಷಗಳಿಂದ ಕಮ್ಯುನಿಸ್ಟ್ ಮತ್ತು ಕಾಂಗ್ರೆಸ್ ನೇತೃತ್ವದ ಸರ್ಕಾರವನ್ನು ಒಂದರ ನಂತರ ಮತ್ತೊಂದರಂತೆ ಆಯ್ಕೆ ಮಾಡುತ್ತಿದ್ದ ಕೇರಳ ಮತದಾರರು, ಈ ಬಾರಿ ವಿಜಯನ್ ಅವರ ಸರ್ಕಾರವನ್ನು ಮುಂದುವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.